ಕೊಂಕಣಿ ಲೋಕೋತ್ಸವ ಸಂಭ್ರಮದ ಚಾಲನೆ
ಮಂಗಳೂರು: ಹಲವು ಧರ್ಮ, ಜಾತಿ ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದರು ಭಾವೈಕ್ಯದ ಸೊಬಗಿನಿಂದ ತುಂಬಿಕೊಂಡು ರಾಷ್ಟ್ರದ ಬದುಕಿಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಕೊಂಕಣಿ ಜನರ ಒಗ್ಗಟ್ಟಿನ ಸಿರಿಯನ್ನು ಪ್ರದರ್ಶಿಸುವ ಅಪೂರ್ವ ಕಾರ್ಯಕ್ರಮ ಕೊಂಕಣಿ ಲೋಕೋತ್ಸವ ಮಂಗಳೂರು ಪುರಭವನದಲ್ಲಿ ವರ್ಣಮಯ ಆರಂಭ ಕಂಡಿತು.
ಮೂರು ದಿನಗಳ ಕಾಲ ನಡೆಯಲಿರುವ ಈ ಕೊಂಕಣಿ ಸಂಸ್ಕøತಿ, ಸಾಹಿತ್ಯ, ಭಾಷೆ, ಪರಂಪರೆ ಮತ್ತು ಶಿಕ್ಷಣದ ಮಹಾಸಂಭ್ರಮದ ಉದ್ಘಾಟನೆಯನ್ನು ಹಲವು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಮುಂಜಾವಿನ ಎಂಟರಿಂದಲೇ ಹೊನ್ನಾವರದ ಮದರ್ ತೆರೇಜಾ ಬ್ಯಾಂಡ್ ಪಂಗಡದಿಂದ ಮನಸೆಳೆಯುವ ಬ್ಯಾಂಡ್ ಬಾರಿಸುತ್ತಾ ದೂರದೂರಗಳಿಂದ ಬರುತ್ತಿದ್ದ ಅತಿಥಿ ಅಭ್ಯಾಗತರನ್ನು ಸಭಾಸ್ಥಳದತ್ತ ಎಳೆಯತೊಡಗಿತು. ಪುರಭವನದ ಮುಂಬಾಗಿಲಿನಲ್ಲಿ ಹಾಕಲಾಗಿದ್ದ ವೇದಿಕೆಯ ಮೇಲೆ ಹಳಿಯಾಳದ ಸಿದ್ಧಿ ಪಂಗಡದವರ ಮನೋರಂಜಕ ಧಫ್ ಕುಣಿತ ನೆರೆದ ಸಾವಿರಾರು ಜನರ ಮನ ಸೆಳೆಯಿತು. ಮುಂಡಗೋಡಿನ ಸಿದ್ಧಿ ಜನರ ದಮ್ಮಾಮ್ ಕುಣಿತದ ಸೊಬಗು ಸುತ್ತಣ ತುಂಬಿದ್ದ ಕಣ್ಮನ ತಣಿಸಿತು. ಆ ನಂತರ ಯಲ್ಲಾಪುರದ ಸಿದ್ಧಿ ಜನರ ಪುಗುಡಿ ನರ್ತನ ರಸಿಕರ ಮನಸ್ಸಿಗೆ ಹಬ್ಬದೂಟವೇ ಆಗಿತ್ತು. ಸಾವಿರಾರು ಜನರ ಮನಗಳಿಗೆ ಮುದ ನೀಡಿದ ಆ ನರ್ತನದ ನಂತರ ಶಿರಸಿಯ ಸಿದ್ಧಿಗಳ ಝಕಾಯ್ ಪಂಗಡದವರಿಂದ ನಡೆದ ಝಕಾಯ್ ನರ್ತನ ಕೊಂಕಣಿಯ ನಾಟ್ಯ ವೈವಿಧ್ತೆಯನ್ನು ಪ್ರಕಟಪಡಿಸಿತು.
ಕೊಂಕಣಿ ಅಕಾಡಮಿಯು ಪುರಭವನದ ಮುಂದೆ ವ್ಯವಸ್ಥೆ ಮಾಡಿದ್ದ ಭವ್ಯ ಚಪ್ಪರದಲ್ಲಿಯ ವ್ಯಾಪಾರ ಮಳಿಗೆಗಳನ್ನು ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ಒಟ್ಟಾಗಿ ರೂಪಿಸಿದ್ದ ವಸ್ತು ಪ್ರದರ್ಶನವನ್ನು ಮಂಗಳೂರು ಪೋಲೀಸ್ ಆಯುಕ್ತರಾದ ಶ್ರೀ ಎಮ್ ಚಂದ್ರಶೇಖರ್, ಭಾ ಪೋ ಸೆ, ಮಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಕೆ ಹರಿನಾಥ್ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಮಹಾಗುರುಗಳಾದ ಸ್ವಾಮಿ ಡೆನಿಸ್ ಪ್ರಭು ಅವರು ಭತ್ತ ಬೇಯಿಸುವ ಹಂಡೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿದರು.
ನೂರಕ್ಕೂ ಮೀರಿ ಸಂಗೀತಗಾರರು ಮಾಂಡ್ ಸೊಭಾಣ್ ಖ್ಯಾತಿಯ ಶ್ರೀ ಎರಿಕ್ ಒಝೇರಿಯೊ ಹಾಗೂ ಶ್ರೀಮತಿ ವಸಂತಿ ಆರ್ ನಾಯಕ್ ನಾಯಕತ್ವದಲ್ಲಿ ಲೋಕೋತ್ಸವದ ಧ್ಯೇಯಗೀತೆ ಹಾಗೂ ‘ಶತಮಾನಾಂ ಥಾವ್ನ್ ಕೊಂಕಣಿ’ ಎನ್ನುವ ಸಂಕಲ್ಪ ಗೀತೆ ಮತ್ತು ‘ಕೊಂಕಣಿ ಆವ್ಸುಕ್ ಜಯ್ ಮ್ಹಣುಂಯಾ’ ಹಾಡುಗಳನ್ನು ಹಾಡುವ ಮೂಲಕ ಉದ್ಘಾಟನೆಯ ಸಭಾ ಕಾರ್ಯಕ್ರಮಕ್ಕೆ ಸುಂದರ ಮುನ್ನುಡಿ ಹಾಡಿದರು. ಶ್ವೇತಾ ಕಾಮತ್ ಮತ್ತು ಬಳಗದವರು ಮನಮೋಹಕ ಸ್ವಾಗತ ನೃತ್ಯ ಮಾಡಿ ನೆರೆದ ಸಭಿಕರ ಮನ ರಂಜಿಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಶ್ರೀ ರೊಯ್ ಕಾಸ್ತೆಲಿನೊನ್ ಅವರು ಸರ್ವರಿಗೂ ಸ್ವಾಗತ ನೀಡುತ್ತಾ ಧರ್ಮ ಜಾತಿಯ ಕೊಂಕಣಿಗರು ತಮ್ಮ ನಡುವಿನ ಜಾತಿ ಧರ್ಮಗಳ ಎಲ್ಲಾ ಭಿನ್ನತೆಗಳನ್ನು ಮರೆತು ‘ನಾವು ಕೊಂಕಣಿಗರು’ ಎಂದು ಹೆಮ್ಮೆಯಿಂದ ಘೋಷಿಸುವಂತೆ ಕರೆ ನೀಡಿದರು. ‘ಕೊಂಕಣಿಯು ಭಾರತದ ವಿವಿಧತೆಯ ಸಂಪತ್ತನ್ನು ಸೂಕ್ತವಾಗಿ ಬಿಂಬಿಸುವ ಭಾಷೆಯಾಗಿದೆ ನಮ್ಮ ಮಾತೃಭಾಷೆಯ ಸಕಲ ಸಂಪತ್ತನ್ನು ಪ್ರತಿಬಿಂಬಿಸಲು ಬಂದಿರುವ ಸರ್ವರಿಗೂ ಅವರು ಹಾರ್ಧಿಕ ಸ್ವಾಗತ ಬಯಸಿದರು.
ಕೊಂಕಣಿ ಜನರ ಬದುಕಿನ ಖಾಸಾ ಭಾಗವಾಗಿರುವ ಸುಂದರ ಗುಮಟೆಯ ಒಳಸುಳಿಯನ್ನು ಬಿಚ್ಚಿ ರಂಗುರಂಗಿನ ಎಸಳುಗಳನ್ನು ಹೊರತರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಮೂರು ದಿನಗಳ ಹಬ್ಬಕ್ಕೆ ಚಾಲನೆ ನೀಡಿದ ಪೂಜ್ಯ ಮೇಯರ್ ಶ್ರೀ ಹರಿನಾಥರವರು ಕೊಂಕಣಿ ಜನರು ಭಾರತದ ಒಟ್ಟಾರೆ ನಾಡು ನುಡಿ ಹಾಗೂ ಸಾಮಾಜಿಕ ಸಾಂಸ್ಕøತಿಕ ಬದುಕಿಗೆ ನೀಡಿದ ಕೊಡುಗೆಯನ್ನು ಕೊಂಡಾಡಿದರು ಹಾಗೂ ಲೋಕೋತ್ಸವ ಕಾರ್ಯಕ್ರಮ ಕೊಂಕಣಿ ಭಾಷೆ-ಸಂಸ್ಕøತಿಯ ನಿಜ ಸಂಪತ್ತನ್ನು ಹೊರಹೊಮ್ಮಿಸಲಿ ಎಂದು ಶುಭ ಹಾರ್ಯೆಸಿದರು. ಕೊಂಕಣಿಗರು ಯಾವ ಬೆಟ್ಟದ ಮೇಲೆ ಗಿಡ ನೆಟ್ಟರೆ ಅದು ಚಿಗುರುತ್ತದೆ ಎಂಬ ಪ್ರತೀತಿಯಿದೆ ಆದುದರಿಂದ ಕೊಂಕಣಿ ಜನರು ನಾಡನ್ನು ನಮ್ಮ ಪರಿಸರವನ್ನು ಅಪಾರವಾಗಿ ಶ್ರೀಮಂತಗೊಳಿಸಿದ್ದಾರೆ ಎನ್ನಬಹುದು ಎಂದು ಅವರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರರವರು ಅಕಾಡಮಿಯ ವತಿಯಿಂದ ಪ್ರಕಟಿಸಲಾದ ಶ್ರೀಮತಿ ಗ್ಲ್ಯಾಡಿಸ್ ಕ್ವಾಡ್ರಸ್ ಪೆರ್ಮುದೆಯವರ ‘ಸುಟ್ಕೆ ಝುಜಾಂತ್ ಸ್ತ್ರೀಯೊ’ (ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು) ಎಂಬ ಪುಸ್ತಕವನ್ನು ಹಾಗೂ ಶ್ರೀಮತಿ ಕ್ಯಾಥರಿನ್ ರೊಡ್ರಿಗಸ್ ಕಟ್ಪಾಡಿಯವರ ‘ಆಜ್ ತಾಕಾ ಫಾಲ್ಯಾಂ ತುಕಾ’ (ಇಂದು ಅವನಿಗೆ ನಾಳೆ ನಿನಗೆ) ಎಂಬ ಎರಡು ಪುಸ್ತಕಗಳ ಲೋಕಾರ್ಪಣೆ ಮಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕೊಂಕಣಿಗರು ದೇಶದ ನಿರಂತರ ಪ್ರಗತಿಗೆ ತಮ್ಮ ಅದಮ್ಯ ಚೇತನವನ್ನು ಧಾರೆ ಎರೆದಿದ್ದಾರೆ ಆದರೆ ಆಧುನಿಕ ಯುಗದಲ್ಲಿ ಇತರ ಭಾಷಾವರ್ಗದವರಿಗೆ ಇಂಗ್ಲೀಷಿನ ಪೆಡಂಭೂತ ಕಾಟ ಕೊಡುವಂತೆ ಕೊಂಕಣಿಗರಿಗೂ ಕೂಡಾ ಇಂಗ್ಲೀಷಿನ ಆಕರ್ಷಣೆ ಹಾಗೂ ವ್ಯಾಮೋಹ ಸೆಳೆಯುತ್ತಿದೆ, ಇದನ್ನು ಎದುರಿಸಲು ಎಲ್ಲಾ ಕೊಂಕಣಿ ಜನರು ಸಂಘಟನೆಗಳು ಕಟಿಬದ್ಧರಾಗಬೇಕೆಂದು ಕರೆ ನೀಡಿದರು. ಒಬ್ಬ ಅಧಿಕಾರಿ, ಒಬ್ಬ ರಾಜಕೀಯ ಮುತ್ಸದ್ಧಿ, ಒಬ್ಬ ಧಾರ್ಮಿಕ ನಾಯಕ ತನ್ನ ತನ್ನ ಮಾತೃಭಾಷೆಯಲ್ಲಿ ಸಂವಹನ ನಡೆಸುವ ಮೂಲಕ ಮಾತೃಭಾಷೆಯನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದ ಎಂದು ಅವರು ತಿಳಿಸಿದರು. ಆಧುನಿಕ ತಾಂತ್ರಿಕತೆಯ ಬಲದಿಂದ ಯಾವುದೇ ಮಾತೃಭಾಷೆ ಒತ್ತಡಕ್ಕೆ ಒಳಗಾಗಬೇಕಿಲ್ಲ ಹಾಗೂ ಜನರು ತಮ್ಮ ಮೂಲಸ್ವರೂಪ ಬಿಟ್ಟುಬಿಡದೆ ಜನರು ಮುಂದುವರಿಯಬಹುದು ಎನ್ನುವುದಕ್ಕೆ ಈ ಲೋಕೋತ್ಸವ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅತಿ ವಂದನೀಯ ಡೆನಿಸ್ ಪ್ರಭು ಅವರು ‘ಕೊಂಕಣಿಯು ಕೊಂಕಣಿಗರ ಪಾಲಿಗೆ ಸ್ವರ್ಗಭಾಷೆಯೇ ನಿಜ. ನಮ್ಮ ಬದುಕಿನ ಸುಖದುಃಖಗಳ ಎಲ್ಲಾ ಹಂತಗಳಲ್ಲಿ ಕೊಂಕಣಿ ಭಾಷೆಯು ನಮ್ಮನ್ನು ಒಗ್ಗಟ್ಟಾಗಿ ಇಟ್ಟಿದೆ ಹಾಗೂ ಮುಂದೆಯೂ ಅದು ನಮ್ಮನ್ನು ಒಂದಾಗಿ ಇಡುವುದು ಖಂಡಿತ ಎಂದು ಅಭಿಮಾನದಿಂದ ತಿಳಿಸಿದರು. ನಿಜವಾದ ಕೊಂಕಣಿಗರು ಜಾತಿ ಧರ್ಮ ಬೇಧವಿಲ್ಲದೆ ನವಾಯತ, ಕುಡುಮಿ, ಪ್ರಭು, ಕಾಮತ್ ಶೆಣಯ್, ಪೊರ್ಬುಗಳೆಲ್ಲರೂ ಒಟ್ಟು ಸೇರಿ ಕೊಂಕಣಿ ಭಾಷೆ ಮಾತನಾಡುವಾಗ ಭಾವನಾತ್ಮಕವಾಗಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಕೊಂಕಣಿ ಭಾಷೆಗೆ ಈ ಎಲ್ಲರೂ ತಾಯಿಯ ಸ್ಥಾನವನ್ನು ನೀಡುತ್ತಾರೆ. ಕೊಂಕಣಿಗರು ಬರೇ ಶಾಂತಿ ಪ್ರಿಯರು ಮಾತ್ರವಲ್ಲ ಶಾಂತಿಸಾಧಕರೂ ಆಗಿದ್ದಾರೆ, ನಿಜವಾಗಿಯೂ ಕೊಂಕಣಿ ಸಾಮಾಜಿಕ ಗೌರವ ತರುವ ಭಾಷೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಶ್ರೀ ಚಂದ್ರಶೇಖರ್ ಅವರು ಕೊಂಕಣಿಗರು ವಿಶ್ವದ ವಿವಿಧ ಭಾಗಗಳಲ್ಲಿ, ವಿವಿಧ ಧರ್ಮಗಳಲ್ಲಿ ಹರಿದು ಹಂಚಿ ಹೋಗಿರುವವರಾಗಿದ್ದರು ತಮ್ಮ ಐಕ್ಯವನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಕೊಂಕಣಿ ಜನರು ಯಾವುದೇ ಕಠಿಣ ಕೆಲಸವನ್ನು ಸೂಕ್ತವಾಗಿ ಹಾಗೂ ನಿಷ್ಠಾವಂತ ಪ್ರವೃತ್ತಿಯಿಂದ ನಿಭಾಯಿಸುವ ಸಾಮಥ್ರ್ಯವುಳ್ಳವರು. ಯಾವುದೇ ಜಟಿಲ, ದ್ವೇಷದ ಹಾಗೂ ತಿಕ್ಕಾಟದ ಪರಿಸ್ಥಿಯನ್ನು ನಗುನಗುತ್ತಾ ಪರಿಹಾರ ಮಾಡುವ ಅವರ ಗುಣ ಇಂದಿನ ಕಾಲದಲ್ಲಿ ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಈ ಕಾರ್ಯಕ್ರಮ ಇತರ ಭಾಷಾಸಮುದಾಯದ ಜನರಿಗೆ ಮಾದರಿಯಾಗಿದೆ, ಕೊಂಕಣಿ ಭಾಷಿಗರ ವ್ಯಕ್ತಿತ್ವದಲ್ಲಿನ ನಮ್ಯತೆ ಹಾಗೂ ಸೌಮ್ಯತೆ ಅವರತ್ತ ಎಲ್ಲರೂ ಆಕರ್ಷಿತರಾಗುವಂತೆ ಮಾಡಿದರು. ಈ ಜನರ ಸ್ವಭಾವದ ಮುಂದೆ ಕ್ಲಲು ಕೂಡಾ ಕರಗುತ್ತದೆ ಎನ್ನುವ ಅಭಿಮಾನದ ಮಾತನ್ನು ಅವರು ಹೇಳಿದರು.
ತದನಂತರ ಅಕಾಡಮಿಯ ಸದಸ್ಯರಿಗೆ ಶಾಲು ಹೊದೆಸಿ ಸನ್ಮಾನಿಸಲಾಯ್ತು.
ಶ್ರೀ ವೆಂಕಟೇಶ್ ಬಾಳಿಗಾ ಅವರು ಉದ್ಘಾಟನಾ ಸಭಾಕಾರ್ಯಕ್ಕೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ಎಮ್ ಆರ್ ಕಾಮತ್ ನಡೆಸಿಕೊಟ್ಟರು.