ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ : ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟನೆ
ಇಂದಿನ ಮಕ್ಕಳು ವಾಟ್ಸಾಪ್, ಟಿವಿಯ ಹಿಂದೆ ಬಿದ್ದು ದಾರ್ಮಿಕ ಕೇಂದ್ರಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಜೀವನದಲ್ಲಿ ದಾರಿ ತಪ್ಪುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ದಾರ್ಮಿಕ ಪ್ರಜ್ಞೆ ಮೂಡಿಸಬೇಕಾದುದು ನಮ್ಮ ಕರ್ತವ್ಯ ಎಂದು ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದರು.
ಅವರು ಶುಕ್ರವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದ ರಥೋತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನಗಳಿಗೆ ಹೋಗವಾಗ ಮಕ್ಕಳನ್ನು ನಮ್ಮ ಜತೆಯಲ್ಲಿ ಕರೆದುಕೊಂಡು ಹೋಗುವ ಪರಿಪಾಠವನ್ನು ಬೆಳೆಸಿ ಅವರು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಬೇಕು ಇದರಿಂದ ಸುಸಂಸ್ಕ್ರತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಕಾರ್ತಿಕ ಗ್ರೂಪ್‍ನ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ಶಂಕರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಡಿಗ ಕೃಷ್ಣಮುರ್ತಿ ಭಟ್, ಭಾಸ್ಕರ ಪಾಲನ್, ರಾಜ ಎ. ಶೇರಿಗಾರ್, ಬಾಬ ಕೆ., ಬೇಬಿ ಎಸ್. ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಹಲವಾರು ವರ್ಷಗಳಿಂದ ದೇವಳದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ವಸಂತ ರಾವ್ ದಂಪತಿ ಮತ್ತು ಅಪ್ಪಿ ಸೇರಿಗಾರ್ತಿ ಅವರಿಗೆ ಶ್ರೀ ಶಂಕರನಾರಾಯಣಾನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಾಟ್ಯ ಮಯೂರಿ ವಿದುಷಿ ಲಕ್ಷ್ಮೀ ಗುರುರಾಜ್ ಅವರನ್ನು ದೇಗುಲದ ವತಿಯಿಂದ ಸಮ್ಮಾನಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ನೃತ್ಯನಿಕೇತನ ತಂಡದಿಂದ ನೂಪುರ ನಿನಾದ ಕಾರ್ಯಕ್ರಮ ನಡೆಯಿತು.