ಕೊನೆಗೂ ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ, ಇಲ್ಲಿದೆ ಪೂರ್ಣ ವೇಳಾಪಟ್ಟಿ

Spread the love

ಕೊನೆಗೂ ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ, ಇಲ್ಲಿದೆ ಪೂರ್ಣ ವೇಳಾಪಟ್ಟಿ

ಕೊನೆಗೂ ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಕಬಕ ಪುತ್ತೂರು ನಿಲ್ದಾಣದವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯ ರೋಡ್‌ ನಿಲ್ದಾಣದ ವರೆಗೆ ವಿಸ್ತರಿಸಲು ಭಾರತೀಯ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಇದರಿಂದ ಮಂಗಳೂರಿನಿಂದ ಪುತ್ತೂರಿನವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯ ರೋಡ್‌ ನಿಲ್ದಾಣದವರೆಗೆ ವಿಸ್ತರಿಸಬೇಕೆಂಬ ನಿಟ್ಟಿನಲ್ಲಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಕಬಕ ಪುತ್ತೂರು ನಿಲ್ದಾಣದವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯ ರೋಡ್‌ ನಿಲ್ದಾಣದ ವರೆಗೆ ವಿಸ್ತರಿಸಲು ಭಾರತೀಯ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ.
ಈ ಸಂಬಂಧ ಚೆನ್ನೈ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ರೈಲ್ವೆ ಮತ್ತು ಹುಬ್ಬಳ್ಳಿ ಪ್ರಧಾನ ಕಚೇರಿ ಹೊಂದಿರುವ ನೈಋುತ್ಯ ರೈಲ್ವೆಯು ನಿರ್ಣಯ ಅಂಗೀಕರಿಸಿ 2024ರ ನವೆಂಬರ್‌ 25ರಂದು ಶಿಫಾರಸು ಪತ್ರವನ್ನು ರೈಲ್ವೆ ಮಂಡಳಿಗೆ ಕಳುಹಿಸಿತ್ತು. ಇದೀಗ ಮಂಗಳವಾರ ಭಾರತೀಯ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕರಾದ ( ಕೋಚಿಂಗ್‌) ವಿವೇಕ್‌ ಕುಮಾರ್‌ ಸಿನ್ಹಾ ಅವರು ಹೊರಡಿಸಿದ ಆದೇಶದಲ್ಲಿ ಸುಬ್ರಹ್ಮಣ್ಯ ರೋಡ್‌ ನಿಲ್ದಾಣದ ವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ.

ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು- ಸುಬ್ರಹ್ಮಣ್ಯ ರೋಡ್‌ ಪ್ಯಾಸೆಂಜರ್‌ ರೈಲು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹೊರಡಲಿದೆ. ಅದು ಬೆಳಗ್ಗೆ 6.30ಕ್ಕೆ ಸುಬ್ರಹ್ಮಣ್ಯ ರೋಡ್‌ ತಲುಪಲಿದೆ. ನಂತರ ಬೆಳಗ್ಗೆ 7 ಗಂಟೆಗೆ ರೈಲು ಹೊರಟು ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಸಂಜೆ 5.45ಕ್ಕೆ ರೈಲು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹೊರಟು ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ರೋಡ್‌ ನಿಲ್ದಾಣ ತಲುಪಲಿದೆ. ರಾತ್ರಿ 8.40ಕ್ಕೆ ಅಲ್ಲಿಂದ ಹೊರಟು ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಲ್ಲಿ ಈ ರೈಲು ರಾತ್ರಿ ತಂಗಬೇಕೆಂಬ ಬೇಡಿಕೆ ಆರಂಭದಲ್ಲಿತ್ತಾದರೂ ತಾಂತ್ರಿಕ ಸಮಸ್ಯೆಯ ಕಾರಣದಿಂದ ಆ ಬೇಡಿಕೆ ಕೈ ಬಿಡಲಾಗಿತ್ತು. ಹೀಗಾಗಿ ರಾತ್ರಿ ರೈಲು ಮಂಗಳೂರಿಗೆ ಮರಳಲಿದೆ. ಮರುದಿನ ಮುಂಜಾನೆ ಮತ್ತೆ ಹೊರಟು ಬರಲಿದೆ.

ಈ ಬದಲಾವಣೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ಯಾತ್ರಾರ್ಥಿಗಳಿಗೆ ಅನುಕೂಲ ಆಗುವುದಲ್ಲದೆ, ಸುಬ್ರಹ್ಮಣ್ಯ, ಎಡಮಂಗಲ, ಕಾಣಿಯೂರು, ಸರ್ವೆ ಮುಂತಾದ ಭಾಗದ ನೂರಾರು ಮಂದಿಗೆ ನಿತ್ಯ ಮಂಗಳೂರಿಗೆ ಕಡಿಮೆ ಪ್ರಯಾಣ ದರದಲ್ಲಿ ಹೋಗಿ ಬರಲು ಸಾಧ್ಯವಾಗಲಿದೆ. ರೈಲು ವಿಸ್ತರಣೆ ಸಂಬಂಧ ರೈಲ್ವೆ ಮಂಡಳಿಯ ಅನುಮತಿ ಕೊಡಿಸುವಲ್ಲಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಪ್ರಯತ್ನಿಸಿದ್ದರು.


Spread the love