ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಕರಾವಳಿ ಫ್ಲೈಓವರ್!

Spread the love

ಕೊನೆಗೂ ಸಂಚಾರಕ್ಕೆ ಮುಕ್ತಗೊಂಡ ಕರಾವಳಿ ಫ್ಲೈಓವರ್!

ಉಡುಪಿ: ಕುಂಟುತ್ತ ಸಾಗುತ್ತಿದ್ದ ಮಂಗಳೂರು-ಕುಂದಾಪುರ-ಉಡುಪಿ-ಮಲ್ಪೆ ರಸ್ತೆಯ ಪ್ರಮುಖ ಸಂಪರ್ಕ ಕೇಂದ್ರವಾದ ಕರಾವಳಿ ಬೈಪಾಸ್ ಜಂಕ್ಷನ್ ಫ್ಲೈಓವರ್ ಕಾಮಗಾರಿ ಕೊನೆಗೂ ಅಂತಿಮ ಹಂತ ತಲುಪಿ, ಶುಕ್ರವಾರದಿಂದ ಪ್ರಾಯೋಗಿಕ ಸಂಚಾರಕ್ಕೆ ತೆರೆದುಕೊಂಡಿದೆ.

2015ರ ಡಿಸೆಂಬರ್ನಲ್ಲಿ ಆರಂಭಗೊಂಡ ಕಾಮಗಾರಿ ಆರಂಭದಲ್ಲಿ ವೇಗ ಪಡೆದರೂ, ಕ್ರಮೇಣ ಆಮೆಗತಿಯಲ್ಲಿ ಸಾಗಿತು. 2016ರೊಳಗೆ ಕಾಮಗಾರಿ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತಾದರೂ, ಮಳೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ರಾ.ಹೆ.ಕಾಮಗಾರಿ ನಿರ್ವಹಿಸುತ್ತಿರುವ ನವಯುಗ ಕನ್ಸ್ಟ್ರಕ್ಷನ್ ಸಂಸ್ಥೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಬೈಪಾಸ್ ಪ್ರದೇಶದಲ್ಲಿ 300 ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣವಾಗಿದ್ದು, ಮಣ್ಣು, ಕಾಂಕ್ರೀಟ್ ತುಂಬಿಸಿ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ. ಸದ್ಯ ಡಾಂಬರು ಹಾಕುವ ಕೆಲಸ ಭರದಿಂದ ಸಾಗುತ್ತಿದೆ. ಫ್ಲೈಓವರ್ಗೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ವಾಹನಗಳು ವ್ಯವಸ್ಥಿತವಾಗಿ ಸಾಗಲು ಮಧ್ಯಭಾಗದಲ್ಲಿ ಡಿವೈಡರ್ ನಿರ್ಮಿಸಿ ದ್ವಿಪಥ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಉಡುಪಿ-ಮಲ್ಪೆ ಸಾಗುವ ವಾಹನಗಳಿಗೆ ಅಂಡರ್ಪಾಸ್ ವ್ಯವಸ್ಥೆ ಮಾಡಲಾಗಿದೆ.

ಕಾಮಗಾರಿ ನಡೆಯುತ್ತಿದ್ದ ಕಾರಣ, ಮೂರು ವರ್ಷಗಳ ಕಾಲ ಉಡುಪಿಯಿಂದ ಮಲ್ಪೆ ಕಡೆಗೆ ಸಾಗಬೇಕಿರುವ ವಾಹನ ಚಾಲಕರು, ದ್ವಿ ಚಕ್ರ ವಾಹನ ಸವಾರರು ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ 250-300 ಮೀಟರ್ ಮುಂದಕ್ಕೆ ಸಾಗಿ ಪೆಟ್ರೊಲ್ ಬಂಕ್ ಸಮೀಪ ಬಲಕ್ಕೆ ತಿರುಗಿ ಮಲ್ಪೆಗೆ ಹೋಗಬೇಕಾಗಿತ್ತು. ಹಾಗೆಯೇ ಮಲ್ಪೆಯಿಂದ ಉಡುಪಿ ಕಡೆಗೆ ಬರಬೇಕಿದ್ದರೆ, ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ 250-300 ಮೀಟರ್ ಸಾಗಿ ಶಾರದಾ ಹೋಟೆಲ್ ಬಳಿ ಬಲಕ್ಕೆ ತಿರುವು ಪಡೆದು ಉಡುಪಿ ಕಡೆಗೆ ಸಾಗಬೇಕಾಗಿತ್ತು. ಸುತ್ತು ಬಳಸುವ ಮಾರ್ಗದಿಂದ ಸಾರ್ವಜನಿಕರು ತತ್ತರಿಸಿದ್ದರು.

ಶುಕ್ರವಾರ ಫ್ಲೈ ಒವರ್ ಪ್ರಾಯೋಗಿಕ ಸಂಚಾರಕ್ಕೆ ತೆರೆದುಕೊಂಡರೂ ಸಹ ಮಾಹಿತಿ ಕೊರತೆಯಿಂದ ವಾಹನ ಚಾಲಕರು ಸರ್ವಿಸ್ ರಸ್ತೆಗಳ ಮೂಲಕವೇ ಪ್ರಯಾಣಿಸುತ್ತಿದ್ದರು. ಕೇವಲ ಒಂದು ಅಂಡರ್ ಪಾಸ್ ಮಾತ್ರ ಸಂಚಾರಕ್ಕೆ ಮುಕ್ತವಾಗಿರಿಸಿದರ ಪರಿಣಾಮ ಬನ್ನಂಜೆ ಕಡೆ ಮತ್ತು ಆದಿ ಉಡುಪಿ ಕಡೆಯಿಂದ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದು ಕಂಡುಬಂತು.

ಚಿತ್ರಗಳು: ಅಂಕಿತ್ ಶೆಟ್ಟಿ


Spread the love