ಕೊರಗರ ಅಭಿವೃದ್ದಿಗೆ 10 ಕೋಟಿ ರೂ ವಿಶೇಷ ಪ್ಯಾಕೇಜ್ಗೆ ಅನುಮೋದನೆ – ಪ್ರಮೋದ್ ಮಧ್ವರಾಜ್
ಉಡುಪಿ : ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಜಿಲ್ಲೆಯ ಕೊರಗರ ಸರ್ವತೋಮುಖ ಅಭಿವೃದ್ದಿ ಹಾಗೂ ಅವರ ಕಾಲೋನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು 10 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಒದಗಿಸಿದ್ದು, ಆ ಮೊತ್ತದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ, ಅನುಮೋದನೆ ಪಡೆಯಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೊರಗ ಜನಾಂಗದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
10 ಕೋಟಿ ರೂ. ನ ವಿಶೇಷ ಪ್ಯಾಕೇಜ್ನ ಕ್ರಿಯಾ ಯೋಜನೆಯಲ್ಲಿ ಅನುಮೋದಿತ ಕಾಮಗಾರಿಗಳನ್ನು ಅತ್ಯಂತ ಶೀಘ್ರದಲ್ಲಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಕೊರಗ ಜನಾಂಗದ ಅಭಿವೃದ್ದಿಗಾಗಿ ಜಿಲ್ಲೆಗೆ ಹೆಚ್ಚುವರಿಯಾಗಿ 3 ಕೋಟಿ ರೂ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿನ ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಅನುಮೋದನೆ ಪಡೆದು ಕಾಮಗಾರಿಗಳನ್ನು ಪ್ರಾರಂಭಿಸಿ ಎಂದು ಐ.ಟಿ.ಡಿ.ಪಿ ಅಧಿಕಾರಿಗಳಿಗೆ ಸೂಚಿಸಿದರು.
ಕೊರಗ ಸಮುದಾಯದವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಅದರ ಸಂಪೂರ್ಣ ವೆಚ್ಚವನ್ನು ಐಟಿಡಿಪಿ ಇಲಾಖೆಯಿಂದ ಭರಿಸಲಾಗುತ್ತಿದ್ದು, ರೋಗಿಯ ಕಡೆಯಿಂದ ಯಾವುದೇ ವೈದ್ಯಕೀಯ ವೆಚ್ಚವನ್ನು ಸ್ವೀಕರಿಸಬಾರದು ಎಂದು ಈಗಾಗಲೇ ಸೂಚಿಸಿದ್ದರೂ ಸಹ ಕೆಲವು ಆಸ್ಪತ್ರೆಗಳಲ್ಲಿ ಇದನ್ನು ಪಾಲಿಸದೇ ಇರುವುದನ್ನು ಕೊರಗ ಮುಖಂಡರು ಸಚಿವರು ಗಮನಕ್ಕೆ ತಂದರು, ಈ ಕುರಿತಂತೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತೆಗಳಿಗೆ ಸುತ್ತೋಲೆ ಕಳುಹಿಸುವಂತೆ ಡಿಹೆಚ್ಓ ಅವರಿಗೆ ಸಚಿವರು ಸೂಚಿಸಿದರು; ವೆಚ್ಚ ಸ್ವೀಕರಿಸುವ ಆಸ್ಪತ್ರೆಗಳ ತನಿಖೆ ನಡೆಸಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ ಸಂಬಂದಪಟ್ಟ ಆರ್.ಟಿ.ಸಿಗಳಲ್ಲಿನ ದೋಷಗಳನ್ನು ಶೀಘ್ರದಲ್ಲಿ ಸರಿಪಡಿಸಿ, ಫೆಬ್ರವರಿ 28 ರ ಒಳಗೆ ಕಂದಾಯ ಇಲಾಖೆಗೆ ಸಂಬಂದಪಟ್ಟಂತೆ ಹಕ್ಕುಪತ್ರ ನೀಡಲು ಬಾಕಿ ಇರುವವರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಿ ಎಂದು ಎಲ್ಲಾ ತಹಸೀಲ್ದಾರ್ಗಳಿಗೆ ಸಚಿವರು ಸೂಚಿಸಿದರು.
ಕೊರಗರ ಸಮುದಾಯವರಿಗೆ ಕೃಷಿ ಬಳಕೆಗೆ ನೀಡಿರುವ ಜಮೀನು ಕೃಷಿ ಯೋಗ್ಯವಿದೆಯೇ ಎಂದು ಪರೀಕ್ಷಿಸಿ, ಕೃಷಿ ಯೋಗ್ಯ ಇಲ್ಲವಾದಲ್ಲಿ ಅದನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಮಾರ್ಪಡಿಸಿ, ಅಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕೊರಗ ಸಮುದಾಯದ ಯುವ ಜನತೆಗೆ ಉದ್ಯೋಗವಕಾಶದಲ್ಲಿ ಮೀಸಲಾತಿ ನೀಡಲು ಅನುಕೂಲವಾಗುವಂತೆ, ಒಳ ಮೀಸಲಾತಿ ನೀಡುವ ಸಂಬಂದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದ ಸಚಿವರು, ಕೊರಗ ಯುವಕರು ಕ್ರೀಡಾ ಚೈತನ್ಯ ಯೋಜನೆಯಡಿ ಕ್ರೀಡಾ ಕಿಟ್ ಪಡೆಯುವಂತೆ ತಿಳಿಸಿದರು.
ಮನೆ ನಿರ್ಮಾಣ ಮಾಡುಲು ಕೊರಗ ಸಮುದಾಯದವರಿಗೆ 4.5 ಲಕ್ಷ ನೀಡಲಾಗುತ್ತಿದ್ದು, ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಸಚಿವರು ಹೇಳಿದರು.
ಕೊರಗ ಸಮುದಾಯದ ಸಮಸ್ಯೆಗಳಿಗೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದು, ಅವರ ಸರ್ವಾಂಗೀಣ ಅಭಿವೃದ್ದಿಗೆ ಬದ್ದವಾಗಿದೆ ಎಂದು ಸಚಿವ ಪ್ರಮೋದ್ ಹೇಳಿದರು.
ಕೊರಗ ಸಮುದಾಯದ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚಿನ ಹಣದ ಅವಶ್ಯಕತೆಯಿದ್ದಲ್ಲಿ ಪ್ರಸ್ತಾವನೆಯೊಂದಿಗೆ ಗಮನಕ್ಕೆ ತರುವಂತೆ ಬೈಂದೂರು ಶಾಸಕ ಗೋಪಾಲ ಪೂಜಾರಿ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಓ ಶಿವಾನಂದ ಕಾಪಶಿ, ಅಡಿಷನಲ್ ಎಸ್ ಪಿ ಕುಮಾರಚಂದ್ರ, ಕೊರಗ ಸಮುದಾಯದ ಮುಖಂಡರು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.