ಕೊರೊನಾ ವೈರಸ್ ಕುರಿತು ಸುಳ್ಳು ವದಂತಿಗಳನ್ನು ನಂಬಬೇಡಿ – ಡಿ.ಹೆಚ್.ಓ. ಡಾ. ಸುಧೀರ್ ಚಂದ್ರ ಸೂಡ
ಉಡುಪಿ: ಕೊರೊನಾ ವೈರಸ್ನಿಂದ ಹರಡುವ ರೋಗದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಈ ವದಂತಿಗಳನ್ನು ನಂಬದಂತೆ ಹಾಗೂ ಗಾಬರಿಪಡುವ ಮತ್ತು ಯಾವುದೇ ಆತಂಕಗೊಳಗಾಗುವ ಅಗತ್ಯವಿಲ್ಲ. ಆದರೆ ಈ ರೋಗದ ಲಕ್ಷಣಗಳನ್ನು ತಿಳಿದುಕೊಂಡು ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಡಿಹೆಚ್ಓ ಡಾ. ಸುಧೀರ್ ಚಂದ್ರ ತಿಳಿಸಿದರು.
ಅವರು ಗುರುವಾರ ಡಿಎಚ್ಓ ಕಚೇರಿಯಲ್ಲಿ ನಡೆದ , ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಕುರಿತ ಕೈಗೊಂಡಿರುವ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳವಾರ ಇಸ್ರೇಲ್ನಿಂದ ಉಡುಪಿಗೆ ಆಗಮಿಸಿರುವ ಸುಮಾರು 75 ವರ್ಷದ ವ್ಯಕ್ತಿಗೆ ಕೆಮ್ಮು ಹಾಗೂ ಶೀತದ ತೊಂದರೆಯಿರುವ ಖಚಿತ ಮಾಹಿತಿ ಅನ್ವಯ ಆತನ ಮನೆಗೆ ಬೇಟಿ ನೀಡಿ, ರೋಗ ಲಕ್ಷಣಗಳ ಹಿನ್ನೆಲೆ ಆತನನ್ನು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದು, ಥ್ರೋಟ್ ಸ್ವಾಬ್ನ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಆತನನಿಗೆ ಕೊರೊನಾ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಂಡು ಮುಂದಿನ ಚಿಕಿತ್ಸೆ ಕುರಿತು ಆಲೋಚಿಸಲಾಗುವುದುಎಂದು ಹೇಳಿದರು.
ಉಡುಪಿಯಲ್ಲಿ ಶಂಕಿತ ಕೊರೊನಾ ವೈರಸ್ ಪೀಡಿತ ರೋಗಿಗಳನ್ನು ದಾಖಲು ಮಾಡಲು ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ಗಳಲ್ಲಿ 3 ವೆಂಟಿಲೇಟರ್ ಸಹಿತ 2 ಐಸಿಯುಗಳ ವ್ಯವಸ್ಥೆ ಮಾಡಿದ್ದು, ತಾಲೂಕು ಆಸ್ಪತ್ರ ಕುಂದಾಪುರ ಮತ್ತು ಕಾರ್ಕಳದಲ್ಲಿ 3 ಬೆಡ್ನ ಐಸೋಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದ್ದು,ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಿಂದಲೇ ಶಂಕಿತ ರೋಗಿಗಳ ಥ್ರೋಟ್ ಸ್ವಾಬ್ಗಳ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸುವುದರಿಂದ ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡುವಂತೆ ಮನವಿ ಮಾಡಿದರು.
ಕೊರೊನಾ ವೈರಸ್ ಹರಡುವುದನ್ನು ತಡೆಯುವ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಾಗಲೇ ತುರ್ತು ಕಾರ್ಯಪಡೆ ರಚಿಸಲು ಕ್ರಮ ಕೈಗೊಳ್ಳಲಾಗಿದ್ದು,ಎಲ್ಲಾ ಆಸ್ಪತ್ರೆಗಳ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಪಂಚಾಯತ್ ಪಿಡಿಓ ಗಳಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಔಷಧ ಮತ್ತು ಮಾಸ್ಕ್ಗಳು ಸೇರಿದಂತೆ ಎಲ್ಲಾ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ದಾಸ್ತಾನು ಇದೆ ಎಂದು ತಿಳಿಸಿದರು.
ಕೊರೊನಾ ವೈರಸ್ನ ಲಕ್ಷಣಗಳು ಮತ್ತು ರೋಗ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣ ಏರ್ಪಡಿಸಲು ಕ್ರಮ ಕೈಗೊಂಡಿದ್ದು, ಉಡುಪಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಲ್ಪೆ ಬೀಚ್, ಕೊಲ್ಲೂರು ದೇವಸ್ಥಾನ ಮುಂತಾದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್, ಪೋಸ್ಟರ್ಗಳನ್ನು ಅಳವಡಿಸಲಾಗುತ್ತಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರಪತ್ರಗಳನ್ನು ಹಂಚಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ರೋಗ ಲಕ್ಷಣಗಳ ಕುರಿತು ಜಿಲ್ಲೆಯಲ್ಲಿ ವ್ಯಾಪಕವಾಗಿ ಹೊರರಾಜ್ಯ ಮತ್ತು ಹೊರದೇಶದಿಂದ ಬರುವವರ ಮೇಲೆ ನಿಗಾ ವಹಿಸಲು ಮತ್ತು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಂತೆ ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದ್ದು, ವಿದೇಶದಿಂದ ಆಗಮಿಸುವ ಜಿಲ್ಲೆಯ ಸಾರ್ವಜನಿಕರು ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ರೋಗ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಕುರಿತಂತೆ ಮಾಹೆ ವಿಶ್ವವಿದ್ಯಾನಿಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದರು.
ಕೊರೊನಾ ವೈರಸ್ ಕುರಿತಂತೆ ಸಾರ್ವಜನಿಕರು ಯಾವುದೇ ಭಯ ಪಡದಂತೆ ತಿಳಿಸಿದ ಡಾ. ಸುಧೀರ್ ಚಂದ್ರ ಸೂಡಾ, ಯಾವುದೇ ಸಮಸ್ಯೆಗಳಿದ್ದಲ್ಲಿ ಆರೋಗ್ಯ ಇಲಾಖೆಯ ಉಚಿತ ಹೆಲ್ಪ್ಲೈನ್ ಸಂಖ್ಯೆ 104 ಅಥವಾ 080-2228541/ 22374658 ಅಥವಾ ಉಡುಪಿ ಜಿಲ್ಲಾ ಸರ್ವೇಕ್ಷಣಾ ಘಟಕ ದೂ.ಸಂ. 0820-2525561 ನ್ನು ಸಂರ್ಕಿಸಬಹುದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಟ್ಟು ಭಯ ಪಡುವ ಅವಶ್ಯಕತೆಯಿಲ್ಲ. ಆದರೆ ಈ ವೈರಸ್ನ ಲಕ್ಷಣಗಳ ಕುರಿತು ಅರಿವು ಹೊಂದಿರುವುದು ಅವಶ್ಯಕ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ , ಜಿಲ್ಲಾ ಕುಟುಂಬ ಕಲ್ಯಣಾಧಿಕಾರಿ ಡಾ. ರಾಮರಾವ್ ಉಪಸ್ಥಿತರಿದ್ದರು.