ಕೊರೋನಾ ಪಾಸಿಟಿವ್ ಸುಳ್ಳು ವದಂತಿ: ಗ್ರಾಹಕರಿಲ್ಲದೆ ಬ್ಯಾಂಕ್ ಬಂದ್!
ಕುಂದಾಪುರ: ಹೆಮ್ಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಬ್ಯಾಂಕ್ವೊಂದರ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂಬ ಸುಳ್ಳು ವದಂತಿ ಶುಕ್ರವಾರ ಎಲ್ಲೆಡೆ ಹಬ್ಬಿ ಒಂದಷ್ಟು ಆತಂಕಕ್ಕೆ ಕಾರಣವಾಗಿದೆ.
ಆದರೆ ಹೆಮ್ಮಾಡಿ ಶಾಖೆಯಲ್ಲಿರುವ ಯಾವೊಬ್ಬ ಸಿಬ್ಬಂದಿಗೂ ಈವರೆಗೆ ಕೊರೋನಾ ಪಾಸಿಟಿವ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುಳ್ಳು ಸುದ್ದಿ ಹೆಮ್ಮಾಡಿ ತುಂಬೆಲ್ಲಾ ಹಬ್ಬಿದ್ದು, ಇದರಿಂದ ಶುಕ್ರವಾರ ಗ್ರಾಹಕರು ಬ್ಯಾಂಕಿನತ್ತ ಸುಳಿಯಲೇ ಇಲ್ಲ. ಈ ಕಾರಣಕ್ಕೆ ಬೆಳಗ್ಗೆ 11 ಗಂಟೆಯಿಂದ ಬ್ಯಾಂಕ್ ಬಂದ್ ಮಾಡಲಾಗಿದೆ.
ಸತ್ಯಾಂಶ ಏನು?
ಇದೇ ಬ್ಯಾಂಕಿನ ಶಿರೂರು ಶಾಖೆಯ ಮ್ಯಾನೇಜರ್ ಒಬ್ಬರಿಗೆ ಪಾಸಿಟಿವ್ ಬಂದಿದ್ದು, ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಗುರುವಾರ ಒಂದು ದಿನದ ಮಟ್ಟಿಗೆ ಬದಲಿಯಾಗಿ ಹೆಮ್ಮಾಡಿಯ ಶಾಖೆಗೆ ಕೆಲಸಕ್ಕೆ ಬಂದಿದ್ದಾರೆ. ಆದರೆ ಆ ಸಿಬ್ಬಂದಿಗೆ ಕೊರೋನಾ ಇರುವುದು ದೃಢವಾಗಿಲ್ಲ. ಹಾಗಾಗಿ ಆತಂಕ ಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಸುಳ್ಳು ಸಂದೇಶವನ್ನು ರವಾನಿಸಿದ್ದು ಗೊಂದಲಕ್ಕೆ ಕಾರಣವಾಗಿದೆ.
ಇಲ್ಲಿ ಸದ್ಯ ಐವರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯ ಎರಡನೇ ಸಂಪರ್ಕ ಆಗಿರುವುದರಿಂದ ಸೀಲ್ಡೌನ್ ಮಾಡಬೇಕೆ ? ಅಥವಾ ಬೇಡವೇ ಎನ್ನುವ ಗೊಂದಲ ಉಂಟಾಗಿದ್ದು, ಈ ಬಗ್ಗೆ ತಾಲೂಕು ಆಡಳಿತದ ಆದೇಶಕ್ಕೆ ಕಾಯುವಂತಾಗಿದೆ.