ಕೊರೋನಾ ಬಗ್ಗೆ ಉಡುಪಿ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ಜಾಗೃತಿ ಮೂಡಿಸಲು ಬಿಷಪ್ ಜೆರಾಲ್ಡ್ ಲೋಬೊ ಸೂಚನೆ
ಉಡುಪಿ : ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಎಲ್ಲ ಚರ್ಚ್ ಗಳಲ್ಲಿ ಕೊರೋನ ವೈರಸ್ಗೆ ಸಂಬಂಧಿಸಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವಂತೆ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೋ ಸೂಚನೆ ನೀಡಿದ್ದು, ಈ ಕುರಿತು ಎಲ್ಲ ಚರ್ಚ್ಗಳಿಗೆ ಸುತ್ತೋಲೆ ಕಳುಹಿಸ ಲಾಗಿದೆ.
ಉಡುಪಿಯ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಬರುವ ಎಲ್ಲಾ ಚರ್ಚ್ ಗಳಲ್ಲಿ ಕೊರೊನಾ ಜಾಗೃತಿ ಮೂಡಿಸಬೇಕೆಂದು ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ. ಶನಿವಾರ ಮತ್ತು ಭಾನುವಾರದ ವಿಶೇಷ ಪ್ರಾರ್ಥನೆಯ ವೇಳೆ ಧರ್ಮಗುರುಗಳು ಚರ್ಚ್ ನಲ್ಲಿ ಕೊರೊನಾ ಸೋಂಕಿನ ಬಗ್ಗೆ ಮತ್ತು ಜನ ಜಾಗೃತಿಯ ಬಗ್ಗೆ ಕಿವಿಮಾತು ಹೇಳಿದ್ದಾರೆ. ಚರ್ಚ್ ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಚರ್ಚುಗಳಲ್ಲಿ ಪವಿತ್ರ ತೀರ್ಥವನ್ನು ಇಡುವ ಪಾತ್ರೆಯನ್ನು ಸ್ವಲ್ಪ ದಿನಗಳ ಕಾಲ ಖಾಲಿಯಾಗಿರಿಸಬೇಕು. ಪವಿತ್ರ ಪರಮ ಪ್ರಸಾದವನ್ನು ನಾಲಿಗೆಯಲ್ಲಿ ಸ್ವೀಕರಿಸುವ ಬದಲು ಕೈಯಲ್ಲಿ ತೆಗೆದುಕೊಳ್ಳಬೇಕು ಎಂದು ಬಿಷಪ್ ಸೂಚನೆ ನೀಡಿದ್ದಾರೆ.
ಕೆಮ್ಮು, ಶೀತ, ಜ್ವರದ ಲಕ್ಷಣ ಇದ್ದವರು ಚರ್ಚಿನಲ್ಲಿ ರವಿವಾರದ ಪೂಜೆಯಲ್ಲಿ ಭಾಗವಹಿಸದೆ ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಪಾಪ ನಿವೇದನೆ ಸಮಯದಲ್ಲಿ ಧರ್ಮಗುರುಗಳು ಮತ್ತು ಭಕ್ತಾದಿಗಳು ಮಾಸ್ಕ್ ಧರಿಸುವುದು ಉತ್ತಮ. ಗುಡ್ ಫ್ರೈಡೆವರೆಗೂ ಕೊರೋನಾ ಸಮಸ್ಯೆ ಪರಿಹಾರವಾಗದೆ ಇದಲ್ಲಿ ಪವಿತ್ರ ಶಿಲುಬೆಯ ಆರಾಧನೆಯ ಸಮಯದಲ್ಲಿ ಶಿಲುಬೆಗೆ ಮುತ್ತಿಕ್ಕುವ ಬದಲು ಕೇವಲ ತಲೆ ಬಾಗಿ ನಮಸ್ಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.