ಕೊರೋನಾ ಲಕ್ಷಣ ಇದ್ದವರು ಮನೆಯಲ್ಲಿ ಕೂರದೆ ಪರೀಕ್ಷೆ ಮಾಡಿಸಿ – ಕೈಮುಗಿದು ಮನವಿ ಮಾಡಿದ ಉಡುಪಿ ಡಿಸಿ ಜಗದೀಶ್
ಉಡುಪಿ: ಉಡುಪಿಯಲ್ಲಿ ಕೊರೋನಾ ಸೋಂಕು ಹೆಚ್ಚಳದ ಜೊತೆಗೆ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದ್ದು ಲಕ್ಷಣ ಇದ್ದವರು ಮನೆಯಲ್ಲೇ ಇರಬೇಡಿ ಕೂಡಲೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಕೈಮುಗಿದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಕೊರೋನಾ ಸೋಂಕು ಹೆಚ್ಚಳದ ಜೊತೆಗೆ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿರುವುದರ ಹಿನ್ನಲೆಯಲ್ಲಿ ವೀಡಿಯೋ ಸಂದೇಶದಲ್ಲಿ ಜನತೆಗೆ ಮನವಿ ಮಾಡಿದ್ದು ಆಸ್ಪತ್ರೆಗೆ ತಡವಾಗಿ ಬರೋದ್ರಿಂದ ಜೀವ ಉಳಿಸಲಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೆ ಕೊರೋನ ಸಮುದಾಯಕ್ಕೆ ಪಸರಿಸಬೇಡಿ, ಕೊರೋನ ದ ಸಣ್ಣ ಲಕ್ಷಣ ಇದ್ದರೂ ಟೆಸ್ಟ್ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಕೊರೋನಾ ಚಿಕಿತ್ಸೆ ಉಚಿತವಾಗಿ ಸಿಗಲಿದ್ದು, ಸಣ್ಣ ಮಟ್ಟಿನ ಜ್ವರ ಶೀತ ಕೆಮ್ಮು ಬಂದರೂ ಟೆಸ್ಟ್ ಮಾಡಿಸಿ. ಈಗ ಪ್ರಾಥಮಿಕ ಸಂಪರ್ಕ ಇದ್ದವರಿಗೆಲ್ಲ ಕೊರೋನ ಬರುತ್ತಿದೆ. ನಿಮಗೆ ನಿಜವಾಗಿಯೂ ಮನೆಯವರ ಮೇಲೆ ಕಾಳಜಿ ಇದ್ದರೆ ಟೆಸ್ಟ್ ಮಾಡಿಸಿ, ಕಷಾಯ ಕುಡಿದು, ಮಾತ್ರೆ ನುಂಗಿ ಸುಮ್ಮನಿರಬೇಡಿ. ಫೀವರ್ ಕ್ಲೀನಿಕ್ ಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಾವಿನ ಆಡಿಟ್ ಮಾಡಲಾಗಿದ್ದು, ಹೃದಯ, ಕಿಡ್ನಿ, ಕ್ಯಾನ್ಸರ್, ಶ್ವಾಸಕೋಶ ಸಂಬಂಧಿತ ರೋಗಿಗಳಲ್ಲಿ ಹೆಚ್ಚುತ್ತಿರುವ ಸಾವಾಗುತ್ತಿದೆ. ಹಿರಿಯ ನಾಗರೀಕರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು ಜಿಲ್ಲೆಯ ಜನರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ. ಕೊರೋನ ಕಾಯಿಲೆ ಸ್ವರೂಪಕ್ಕೆ ಬೇಕಾದ ಚಿಕಿತ್ಸಾ ವ್ಯವಸ್ಥೆ ಇದ್ದು ಸದ್ಯ ಹಲವು ಪ್ರಕರಣಗಳು ಆಸ್ಪತ್ರೆ ದಾರಿಯಲ್ಲಿ ಪ್ರಾಣ ಹೋಗುವ ಘಟನೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಇನ್ನೂ ಕೂಡ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಪಾಲನೆಯಾಗುತ್ತಿಲ್ಲ ಇನ್ನಾದರೂ ಪಾಲಿಸಿ ಎಂದು ಅವರು ಮನವಿ ಮಾಡಿದ್ದಾರೆ.