ಕೊರೋನಾ ಲಾಕ್ ಡೌನ್ ; ಊರಿಗೆ ಹೊರಟ ವಲಸೆ ಕಾರ್ಮಿಕರಿಗೆ ಶಾಸಕ ರಘುಪತಿ ಭಟ್ ಸಹಾಯ ಹಸ್ತ
ಉಡುಪಿ: ಕೊರೋನಾವೈರಸ್ ವಿರುದ್ಧ ಹೋರಾಟದ ಭಾಗವಾಗಿರುವ ಭಾರತ ಲಾಕ್‌ಡೌನ್‌ನಿಂದಾಗಿ ಸಮಸ್ಯೆಗೆ ಸಿಲುಕಿ ಅತ್ತ ಊರಿಗೆ ಹೋಗಲು ಆಗದೆ, ಇಲ್ಲಿ ಸೂಕ್ತ ಊಟದ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದ ಉತ್ತರ ಕರ್ನಾಟಕ ಮೂಲಕ ಕಾರ್ಮಿಕರಿಗೆ ಉಡುಪಿ ಶಾಸಕರಾದ ರಘುಪತಿ ಭಟ್ ಅವರಿಗೆ ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ.
ಮೊದಲೇ ಸಾಕಷ್ಟು ಸಂಕಷ್ಟಗಳಿಗೆ ಈಡಾಗಿದ್ದ ಈ ಬಡ ಕಾರ್ಮಿಕರು ವಾಹನಕ್ಕೆ ಕೊಟ್ಟ ಒಂದೆರಡು ಸಾವಿರ ರೂಪಾಯಿಯನ್ನು ಕಳೆದುಕೊಂಡು ಕೈಸುಟ್ಟು ಕೊಂಡಿದ್ದಾರೆ ಇದೀಗ ಈ ಎಲ್ಲಾ ವಲಸೆ ಕಾರ್ಮಿಕರು ನಗರದ ಮಧ್ಯಭಾಗದಲ್ಲಿರುವ ಬೀಡಿನಗುಡ್ಡೆ ಮೈದಾನದಲ್ಲಿ ಜಮಾಯಿಸಿದ್ದು ನಮಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಗೋಗರೆಯುತ್ತಿದ್ದಾರೆ. ಕೊರೋನಾ ಹರಡುವ ಭಯದ ಕಾರಣ ಸಾಂಕ್ರಾಮಿಕ ರೋಗದ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ಜಿಲ್ಲಾ ಗಡಿ ಬಂದ್ ಆಗಿದೆ. ಹಾಗಾಗಿ ಇವರಾರೂ ಊರು ಬಿಟ್ಟು ತೆರಳುವಂತಿಲ್ಲ.
ಇದೀಗ ಬೀಡಿನಗುಡ್ಡೆಯಲ್ಲಿ ಸಿಲುಕಿಕೊಂಡಿರುವ ದಿನಗೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿರುವ ಉಡುಪಿ ಶಾಸಕ ಕೆ. ರಘುಪತಿ ಭಟ್ ಮುಂದಾಗಿದ್ದಾರೆ. “ಈ ಜನರೆಲ್ಲರೂ ದಿನಗೂಲಿ ನೌಕರರು. ನಾವು ಅವರಿಗೆ 10 ದಿನಗಳವರೆಗೆ ತರಕಾರಿಗಳು ಮತ್ತು ಆಹಾರ ಧಾನ್ಯಗಳನ್ನು ನೀಡುತ್ತೇವೆ. ಅವರು ಶಿರೂರು ತಲುಪಿದ್ದಾರೆಂದು ನನಗೆ ತಿಳಿದಿರಲಿಲ್ಲ. ಯಾರೊಬ್ಬರೂ ಊಟವಿಲ್ಲದೆ ಸಂಕಟ ಪಡುವ ಅಗತ್ಯವಿಲ್ಲ. ನಾನು ಹಾಗೂ ಉಡುಪಿ ಜನರು ಅವರ ಆಹಾರ ವ್ಯವಸ್ಥೆ ನೋಡಿಕೊಳ್ಳಲಿದ್ದೇವೆ” ಶಾಸಕರು ಹೇಳಿದ್ದಾರೆ.
ಉತ್ತರ ಕರ್ನಾಟಕದಿಂದ ವಲಸೆ ಬಂದ ಕಾರ್ಮಿಕರ ದುಃಸ್ಥಿತಿಗೆ ಪೊಲೀಸರು ಮತ್ತು ಜಿಲ್ಲಾಡಳಿತ ಸ್ಪಂದಿಸಿ ಅವರನ್ನು ಸಂತೈಸಿದೆ.