ಕೊರೋನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುವವರ ಕಠಿಣ ಕ್ರಮ – ಎಸ್ಪಿ ವಿಷ್ಣುವರ್ಧನ್ ಎಚ್ಚರಿಕೆ

Spread the love

ಕೊರೋನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುವವರ ಕಠಿಣ ಕ್ರಮ – ಎಸ್ಪಿ ವಿಷ್ಣುವರ್ಧನ್ ಎಚ್ಚರಿಕೆ

ಮಣಿಪಾಲ: ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ 144 (3) ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿರುವ ಆದೇಶವನ್ನು ಯಾರೇ ಆದರೂ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಎಚ್ಚರಿಕೆ ನೀಡಿದ್ದಾರೆ.

ಅವರು ಗುರುವಾರ ಮಣಿಪಾಲದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಕೋರೊನಾ ವೈರಸ್ ವಿಚಾರದಲ್ಲಿ ಮತ್ತು ಅದರ ವಿರುದ್ದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಕುರಿತಾಗಿ ಎಲ್ಲಾ ಠಾಣೆಯ ಠಾಣಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು ಬೀಟ್ ಹಂತದ ಕಾನ್ ಸ್ಟೇಬಲ್ ಗಳಿಗೂ ಕೂಡ ತರಬೇತಿಯನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144(3) ನಿಷೇಧಾಜ್ಞೆ ಜಾರಿಗೆ ಗೊಳಿಸಿದ್ದು ಇದನ್ನು ಪ್ರತಿಯೊಬ್ಬರು ಕೂಡ ಪಾಲಿಸಬೇಕು. ಸರಕಾರ ಮತ್ತು ಜಿಲ್ಲಾಡಳಿತ ಜನಸಾಮಾನ್ಯರ ರಕ್ಷಣೆಯ ನಿಟ್ಟಿನಲ್ಲಿ ಈ ಕೆಲಸವನ್ನು ಮಾಡಿದ್ದು ಅದನ್ನು ಗೌರವಿಸಲೇಬೇಕು. ಯಾರೇ ಆದರೂ ಅದನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಅಲ್ಲದೆ ಕೋರೊನಾ ವೈರಸ್ ಹರಡುವಿಕೆ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ದ ಎಪಿಡೆಮಿಕ್ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಂತಹವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಪ್ರತಿಯೊಬ್ಬರು ಸರಕಾರ ಮತ್ತು ಜಿಲ್ಲಾಡಳಿತದ ಆದೇಶಕ್ಕೆ ತಲೆಬಾಗುವುದು ಕಡ್ಡಾಯ ಎಂದರು.


Spread the love