Home Mangalorean News Kannada News ಕೊರೋನಾ ಸಂಕಷ್ಟ; ಉಡುಪಿ ಕೃಷ್ಣ ಮಠ ನಿರ್ವಹಣೆಗೆ ರೂ 1 ಕೋಟಿ ಬ್ಯಾಂಕ್ ಸಾಲಕ್ಕೆ ಅರ್ಜಿ

ಕೊರೋನಾ ಸಂಕಷ್ಟ; ಉಡುಪಿ ಕೃಷ್ಣ ಮಠ ನಿರ್ವಹಣೆಗೆ ರೂ 1 ಕೋಟಿ ಬ್ಯಾಂಕ್ ಸಾಲಕ್ಕೆ ಅರ್ಜಿ

Spread the love

ಕೊರೋನಾ ಸಂಕಷ್ಟ; ಉಡುಪಿ ಕೃಷ್ಣ ಮಠ ನಿರ್ವಹಣೆಗೆ ರೂ 1 ಕೋಟಿ ಬ್ಯಾಂಕ್ ಸಾಲಕ್ಕೆ ಅರ್ಜಿ

ಉಡುಪಿ: ಕೊರೋನಾ ಸಂಕಷ್ಟದಿಂದಾಗಿ ಉದ್ಯಮಿಗಳು ವಿವಿಧ ವರ್ಗಗಳು ಸರಕಾರದ ಮುಂದೆ ಅಂಗಲಾಚಿದ್ದಾಯಿತು. ಈಗ ಮಠ-ಮಂದಿರಗಳು ಕೂಡ ಬ್ಯಾಂಕಿನ ಮುಂದೆ ಸಾಲಕ್ಕಾಗಿ ಕೈಯ್ಯೊಡ್ಡುವಂತಾಗಿದೆ. ಅದಕ್ಕೆ ಉದಾಹರಣೆಯೆಂಬಂತೆ ವಿಶ್ವಪ್ರಸಿದ್ದ ಕೃಷ್ಣ ಮಠ ಕೊರೊನಾ ಕಾರಣವೂ ಸೇರಿದಂತೆ ಆದಾಯ ರಹಿತದ ದಿನಗಳಲ್ಲಿ ಮಠದ ವ್ಯವಸ್ಥೆ ಮತ್ತು ಸಿಬಂದಿ ಪಾಲನೆ ಇತ್ಯಾದಿಗಳಿಗಾಗಿ ಪರ್ಯಾಯ ಅದಮಾರು ಶ್ರೀಕೃಷ್ಣಮಠ 1 ಕೋ. ರೂ. ಸಾಲ ಕೋರಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಸಾಲ ಮಂಜೂರಾಗಿದ್ದು, 15 ಲಕ್ಷ ರೂ.ನಷ್ಟು ಹಣ ಪಡೆಯಲಾಗಿದೆ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪ್ರತಿನಿತ್ಯ ಶ್ರೀಕೃಷ್ಣನ ನಿತ್ಯಪೂಜೆ, ಸುಮಾರು 300 ಮಂದಿಗಾಗುವಷ್ಟು ಅನ್ನ ನೈವೇದ್ಯ, 100 ತೆಂಗಿನಕಾಯಿ, 2 ಡಬ್ಬಿ ತುಪ್ಪ, 1 ಡಬ್ಬಿ ಎಳ್ಳೆಣ್ಣೆ ಬಳಕೆಯಾಗುತ್ತದೆ. ಕೃಷ್ಣಮಠದಲ್ಲಿನ 300 ಮಂದಿ ಸಿಬ್ಬಂದಿಪೈಕಿ ಅರ್ಧದಷ್ಟು ಮಂದಿಗೆ ರಜೆ ನೀಡಲಾಗಿದ್ದರೂ ಅವರಿಗೆ ಪೂರ್ಣ ವೇತನ ನೀಡಲಾಗುತ್ತಿದೆ. ಮಠದಲ್ಲಿ ಕೆಲಸ ಮಾಡುವ 150 ಸಿಬ್ಬಂದಿ ಊಟ, ವಿದ್ಯುತ್ ಶುಲ್ಕ ಇತ್ಯಾದಿ ಸೇರಿ ದಿನಕ್ಕೆ ಸುಮಾರು 1.25 ಲಕ್ಷ ರೂ.ಗಳಿಗೂ ಅಧಿಕ ಖರ್ಚು ಬರುತ್ತಿದೆ.

ಮಠದ ನಿರ್ವಹಣೆ, ಅಗತ್ಯ ದುರಸ್ತಿ ಇತ್ಯಾದಿ ಕೈಗೊಳ್ಳಲಾಗಿದೆ. ದಾನಿಗಳು, ಭಕ್ತರು ಹಾಗೂ ಸರ್ಕಾರದಿಂದ ಹಣ ಕೇಳುವುದು ಈ ಪರಿಸ್ಥಿತಿಯಲ್ಲಿ ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ. ಮಠದ ಆಶ್ರಯದಲ್ಲಿ ಶೈಕ್ಷಣಿಕ ಸಂಸ್ಥೆಗಳಿದ್ದರೂ ಅದರಿಂದ ಮಠ ಹಣ ಅಪೇಕ್ಷಿಸುವುದು ಸರಿಯಲ್ಲ. ಮಠದ ಆದಾಯದ ಪಾಲನ್ನು ಶೈಕ್ಷಣಿಕ ಸಂಸ್ಥೆಗಳಿಗೆ ನೀಡುವ ಪರಿಪಾಠವಿದೆ. ಆದರೆ, ಶೈಕ್ಷಣಿಕ ಸಂಸ್ಥೆಗಳಿಂದ ಮಠ ಆದಾಯ ಪಡೆದಿಲ್ಲ ಎಂದ ಶ್ರೀಪಾದರು, ಈ ಹಿಂದೆ ತಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪರ್ಯಾಯ (1988- 90) ಅವಧಿಯಲ್ಲಿ 25 ಲಕ್ಷ ಸಾಲ ಪಡೆಯಲಾಗಿತ್ತು ಎಂದು ಶ್ರೀಗಳು ಸ್ಮರಿಸಿದರು.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ನಾನು ಸರಕಾರದ ಮುಂದೆ ಕೈಚಾಚಿ ವುದಿಲ್ಲ ಎಂದು ಅದಮಾರು ಶ್ರೀಗಳು ತಿಳಿಸಿದ್ದಾರೆ. ಈ ಮಹಾಮಾರಿ ಯಿಂದಾಗಿ ಎಲ್ಲರಿಗೂ ಸಮಸ್ಯೆಯಾಗಿದೆ ಹಾಗಂತ ಎಲ್ಲರ ಸಾಲವನ್ನು ತೀರಿಸಿಕೊಂಡು ಕೂರಲು ಸರಕಾರಕ್ಕೂ ಸಾಧ್ಯವಿಲ್ಲ. ಬ್ಯಾಂಕಿನಿಂದ ಸಾಲ ಪಡೆದರೆ ನಮ್ಮ ಜವಾಬ್ದಾರಿಯೂ ಹೆಚ್ಚುತ್ತದೆ. ಸಾಲದಿಂದ ಸ್ವಾವಲಂಬನೆ ಸಾಧ್ಯವಿದೆ ನಾವು ಸರಕಾರವನ್ನು ಅವಲಂಬಿಸದೆ ಸ್ವಂತ ಪ್ರಯತ್ನದಿಂದ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಶ್ರೀಗಳು ನುಡಿದಿದ್ದಾರೆ

ಮಾರ್ಚ್ 22ರಿಂದ ಮಠಕ್ಕೆ ಭಕ್ತರ ಪ್ರವೇಶವಿಲ್ಲ. ಒಟ್ಟು ಐದು ತಿಂಗಳು ಭಕ್ತರಿಂದ ಬರುವ ಆದಾಯ ನಿಂತುಹೋಗಿದೆ. ಆದರೆ ಈ ಅವಧಿಯಲ್ಲಿ ಕನಿಷ್ಠ 1.5 ಕೋ.ರೂ. ಖರ್ಚು ಬಂದಿದೆ. ಈಗಾಗಲೇ ಅದಮಾರು ಮಠದಿಂದ 60 ಲ.ರೂಪಾಯಿ ದುಡ್ಡನ್ನು ಪಡೆದುಕೊಳ್ಳಲಾಗಿದೆ. ಶ್ರೀಕೃಷ್ಣ ಮಠವಲ್ಲದೆ ಅದಮಾರು ಮಠದಲ್ಲಿಯೂ ಸಿಬಂದಿಗಳ ಆಹಾರದ ಖರ್ಚು ಹೊರತುಪಡಿಸಿ ತಿಂಗಳಿಗೆ 6 ಲ.ರೂ. ಖರ್ಚು ಬರುತ್ತಿದೆ. ಇದಲ್ಲದೆ ಅದಮಾರು ಮೂಲಮಠ, ಮಣಿಪುರ ಮಠ, ಉದ್ಯಾವರದ ಕುದ್ರುತೋಟದಲ್ಲಿರುವ ಗೋಶಾಲೆ, ಸಿಬಂದಿ ಖರ್ಚು ಬೇರೆ ಇದೆ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.


Spread the love

Exit mobile version