Home Mangalorean News Kannada News ಕೊರೋನ ತಡೆಗಟ್ಟಲು ಮಸೀದಿ-ದರ್ಗಾಗಳಲ್ಲಿ ಸ್ವಚ್ಛತೆ ಪರಿಪಾಲನೆ ಅಗತ್ಯ: ಎ.ಬಿ.ಇಬ್ರಾಹಿಮ್

ಕೊರೋನ ತಡೆಗಟ್ಟಲು ಮಸೀದಿ-ದರ್ಗಾಗಳಲ್ಲಿ ಸ್ವಚ್ಛತೆ ಪರಿಪಾಲನೆ ಅಗತ್ಯ: ಎ.ಬಿ.ಇಬ್ರಾಹಿಮ್

Spread the love

ಕೊರೋನ ತಡೆಗಟ್ಟಲು ಮಸೀದಿ-ದರ್ಗಾಗಳಲ್ಲಿ ಸ್ವಚ್ಛತೆ ಪರಿಪಾಲನೆ ಅಗತ್ಯ: ಎ.ಬಿ.ಇಬ್ರಾಹಿಮ್

ಬೆಂಗಳೂರು: ಕೊರೋನ ವೈರಸ್ ಬಹು ವ್ಯಾಪಕವಾಗಿ ದಿನದಿಂದ ದಿನಕ್ಕೆ, ಹರಡುತ್ತಿರುವುದರಿಂದ ಮಸೀದಿ, ದರ್ಗಾಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆ ಪರಿಪಾಲನೆ ಮಾಡುವುದು ಅಗತ್ಯ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಮ್ ತಿಳಿಸಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕವಾಗಿ ಭಾರತದಲ್ಲಿ ವಿದೇಶಗಳಿಂದ ಆಗಮಿಸಿದ ಸೋಂಕಿತ ವ್ಯಕ್ತಿಗಳಿಂದ ಹರಡುತ್ತಿರುವುದು ವೈದ್ಯಕೀಯ ವರದಿಗಳಿಂದ ತಿಳಿದು ಬಂದಿದೆ. ಇಸ್ಲಾಮ್ ಧಾರ್ಮಿಕ ಯಾತ್ರೆಯಾದ ಉಮ್ರಾ ಯಾತ್ರೆಯಿಂದ ಭಾರತಕ್ಕೆ ಹಿಂದಿರುಗಿ ಬಂದ ಕೊರೋನ ಪೀಡಿತ ವ್ಯಕ್ತಿ ಕಲಬುರಗಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಮ್ರಾ ಯಾತ್ರೆ ಕೈಗೊಂಡಿರುವವರು ಹಾಗೂ ವಿದೇಶಗಳಿಂದ ಬಂದಿರುವವರು, ಇತರ ನಮಾಝ್ ಮಾಡುವವರ ಆರೋಗ್ಯದ ಹಿತದೃಷ್ಟಿಯಿಂದ ಮಸೀದಿಗಳಿಂದ ದೂರ ಉಳಿದು ಮನೆಯಲ್ಲಿಯೆ ನಮಾಝ್ ಮಾಡಲು ಕೋರಲಾಗಿದೆ ಎಂದು ಇಬ್ರಾಹಿಮ್ ಮನವಿ ಮಾಡಿದ್ದಾರೆ.
ಮಸೀದಿಗಳಲ್ಲಿ ಅಳವಡಿಸಿರುವ ಏರ್ ಕಂಡೀಷನರ್, ಕೂಲರ್‌ಗಳಿಂದ ಈ ಕೊರೋನ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇವುಗಳನ್ನು ಉಪಯೋಗಿಸದೆ ಪ್ರಾರ್ಥನೆಯನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಯಾವುದೇ ರೀತಿಯ ಕೆಮ್ಮು, ಉಸಿರಾಟದ ತೊಂದರೆ, ಶೀತ, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿರುವ ಹಾಗೂ ಮಧುಮೇಹ, ರಕ್ತದ ಒತ್ತಡದಿಂದ ಬಳಲುತ್ತಿರುವ ಮತ್ತು ಇತರೆ ಕಾಯಿಲೆಗಳಿಂದ ಅನಾರೋಗ್ಯ ಪೀಡಿತ ವ್ಯಕ್ತಿಗಳು ಮಸೀದಿಗಳಿಗೆ ನಮಾಝ್ ಮಾಡಲು ಹೋಗದೆ ಅವರವರ ಮನೆಗಳಲ್ಲಿಯೆ ನಮಾಝ್ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಹಿರಿಯ ನಾಗರಿಕರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆವುಳ್ಳ ವ್ಯಕ್ತಿಗಳಿಗೆ ಈ ಕೊರೋನ ವೈರಸ್ ತಗಲುವ ಸಾಧ್ಯತೆ ತುಂಬಾ ಹೆಚ್ಚಾಗಿರುವುದರಿಂದ ಮಸೀದಿಗಳಿಗೆ ತೆರಳದೆ ಮನೆಗಳಲ್ಲಿಯೆ ನಮಾಝ್ ಮಾಡಬೇಕು ಎಂದು ಇಬ್ರಾಹಿಮ್ ತಿಳಿಸಿದ್ದಾರೆ.

ಸೌದಿ ಅರೇಬಿಯಾ, ಯುಎಇ ಹಾಗೂ ಕುವೈತ್ ರಾಷ್ಟ್ರಗಳಲ್ಲಿ ಶುಕ್ರವಾರದ ಜುಮ್ಮಾ ನಮಾಝ್ ಅನ್ನು ಮಸೀದಿಗಳಲ್ಲಿ ಸಾಮೂಹಿಕವಾಗಿ ಮಾಡುವುದನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಸೀದಿಗಳ ವ್ಯವಸ್ಥಾಪಕ ಸಮಿತಿಗಳಲ್ಲಿ ಚರ್ಚಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಅವರು ಕೋರಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆ ಜನರು ಒಟ್ಟುಗೂಡುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಮಸೀದಿಗಳಲ್ಲಿ ಶುಕ್ರವಾರದ ಜುಮ್ಮಾ ಸಹಿತ ಎಲ್ಲ ನಮಾಝ್‌ಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಮಸೀದಿಗಳ ಆಡಳಿತ ಮಂಡಳಿಯು ಎಲ್ಲ ಧರ್ಮಾನುಯಾಯಿಗಳ ಆರೋಗ್ಯದ ಹಿತದೃಷ್ಟಿಯಿಂದ ಸಮಂಜಸವಾದ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.


Spread the love

Exit mobile version