ಕೊರೋನ ವಾರಿಯರ್ಸ್ ಗಳ ಮೇಲೆ ಕೈ ಮಾಡಿದರೆ ಗೂಂಡಾ ಕೇಸ್: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಕೊರೋನ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ನಡೆದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಲ್ಲೆ ಮಾಡಿದವರನ್ನು ಗೂಂಡಾ ಕೇಸ್ ಹಾಕುವ ಮೂಲಕ ಜೈಲಿಗಟ್ಟಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಕೊರೋನಾ ವಾರಿಯರ್ಸ್ ಗಳ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಪೊಲೀಸರಿಗೆ ಲಾಠಿ ರಿವಾಲ್ವರ್ ಕೊಟ್ಟಿರುವುದು, ಪ್ರದರ್ಶನಕ್ಕೆ ಅಲ್ಲ, ಜೀವರಕ್ಷಣೆಗಾಗಿ ಆದರೆ ಅವರ ಮೇಲೆಯೇ ಹಲ್ಲೆ ನಡೆಯುವುದನ್ನು ಸಹಿಸಲಾಗದು ಎಂದರು.
ಜನರಿಗೆ ಮುಜರಾಯಿ ಇಲಾಖೆಯ ವತಿಯಿಂದ ಪ್ರತೀ ದೇವಸ್ಥಾನಗಳಲ್ಲೂ ಆಹಾರ ವಿತರಿಸಲಾಗುತ್ತಿದೆ. ಕೊರೋನ ನಿಯಂತ್ರಣಕ್ಕಾಗಿ ಎಲ್ಲರ ಸಹಕಾರ ಅಗತ್ಯ. ಕೊರೋನ ತಪಾಸಣೆಗೆ ಹೋದವರ ಮೇಲೆ ಹಲ್ಲೆಗೆ ಯಾರಾದರೂ ಮುಂದಾದಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.