ಕೊರೋನ ವೈರಸ್: ಉಡುಪಿ ಜಿಲ್ಲೆಯಲ್ಲಿ ಒಂದೇ 16 ಮಂದಿ ಶಂಕಿತರು ಆಸ್ಪತ್ರೆಗೆ ದಾಖಲು
ಉಡುಪಿ : ಕೊರೋನ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂವಿನ ಮಧ್ಯೆಯೇ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 16 ಮಂದಿ ಶಂಕಿತರು ಕೊರೋನ ಸೋಂಕಿನ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಭಾನುವಾರ ಉಡುಪಿ ತಾಲೂಕಿನ 11 ಮಂದಿ, ಕಾರ್ಕಳ ತಾಲೂಕಿನ 3 ಹಾಗೂ ಕುಂದಾಪುರ ತಾಲೂಕಿನ 2 ಮಂದಿ ಒಟ್ಟು 16 ಮಂದಿ ಅಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ದೇಹದ ಅಂಶಗಳು ಶಿವಮೊಗ್ಗ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಇವರೆಲ್ಲರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಮಾ.23 ರಂದು ಹಾಸನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಈ ಹಿಂದೆ ಕಳುಹಿಸಲಾಗಿರುವ 10 ಮಂದಿಯ ವರದಿ ಇನ್ನೂ ಬಂದಿಲ್ಲ. ನೆಗೆಟಿವ್ ವರದಿ ಬಂದಿರುವ ಇಬ್ಬರು ಸೇರಿದಂತೆ ಪ್ರಸ್ತುತ ಒಟ್ಟು 28 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 61 ಮಂದಿ ಸೇರಿದಂತೆ ಈವರೆಗೆ ಒಟ್ಟು 448 ಮಂದಿ ಕೊರೋನೊ ವೈರಸ್ ತಪಾಸಣೆಗೊಳಗಾಗಿದ್ದು, ಇವರಲ್ಲಿ 26 ಮಂದಿ 28 ದಿನಗಳ ತ್ರೀವ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇಂದು 22 ಮಂದಿ ಸೇರಿದಂತೆ ಒಟ್ಟು 320ಮಂದಿ ಗೃಹ ನಿಗಾದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.