ಕೊರೋನ ವೈರಸ್ : ಸಜಿಪನಡು ಗ್ರಾಮದ ಮಗು ಆಸ್ಪತ್ರೆಯಿಂದ ಬಿಡುಗಡೆ
ಮಂಗಳೂರು: ಕೋವಿಡ್ – 19 (ಕೊರೋನ) ವೈರಸ್ ಸೋಂಕು ದೃಢಪಟ್ಟು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಜಿಪ ನಡು ಗ್ರಾಮದ ಮಗು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಗ್ರಾಮದ ಹತ್ತು ತಿಂಗಳ ಗಂಡು ಮಗುವನ್ನು ಮಾ. 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರನೆ ದಿನ ಮಗುವಿನ ಗಂಟಲ ಸ್ರಾವವನ್ನು ಕೋವಿಡ್ – 19 ಪರೀಕ್ಷೆಗೆ ಕಳುಹಿಸಿದ್ದು ಮಾ. 26ರಂದು ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.
10 ತಿಂಗಳ ಮಗುವಿನ ಕರೋನಾ ಪ್ರಕರಣವು, ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕರೋನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟ ಮಗುವಿನ ಐಸೋಲೇಶನ್ ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿ, ಮಗುವನ್ನು ಗುಣಮುಖಗೊಳಿಸಿದ್ದಾರೆ. ಇದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೂ ಖ್ಯಾತಿ ತಂದಿದೆ.
ಅದೇ ರೀತಿ, ಮಗುವಿನ ಗ್ರಾಮದಲ್ಲಿ ಯಾರಿಗೂ ಕರೋನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಕರೋನಾ ದೃಟಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಲಾಗಿತ್ತು. ಗ್ರಾಮಸ್ಥರು ಬಹಳ ಉತ್ತಮ ಸಹಕಾರ ನೀಡಿದ್ದಾರೆ. ಈ ಅವಧಿಯಲ್ಲಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಾಗ್ರಿಗಳು, ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿದೆ.