Home Mangalorean News Kannada News ಕೊಲಾಸೊ ಆಸ್ಪತ್ರೆಯಲ್ಲಿ 500, 1000 ನೋಟು ಸ್ವಿಕರಿಸಲು ನಿರಾಕರಣೆ; ಡಿವೈಎಫ್ ಐ ಪ್ರತಿಭಟನೆ

ಕೊಲಾಸೊ ಆಸ್ಪತ್ರೆಯಲ್ಲಿ 500, 1000 ನೋಟು ಸ್ವಿಕರಿಸಲು ನಿರಾಕರಣೆ; ಡಿವೈಎಫ್ ಐ ಪ್ರತಿಭಟನೆ

Spread the love

ಕೊಲಾಸೊ ಆಸ್ಪತ್ರೆಯಲ್ಲಿ 500, 1000 ನೋಟು ಸ್ವಿಕರಿಸಲು ನಿರಾಕರಣೆ; ಡಿವೈಎಫ್ ಐ ಪ್ರತಿಭಟನೆ
ಮಂಗಳೂರು: ನಗರದ ಕೊಲಾಸೊ ಆಸ್ಪತ್ರೆಯಲ್ಲಿ ಸಿಝೇರಿಯನ್ ಹೆರಿಗೆ ಬಳಿಕ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಂದರ್ಭ ಹಳೆಯ 500 ಮತ್ತು 1000 ರೂಪಾಯಿಯ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿ ‘ಕಾನೂನು’ ಮಾತಾಡಿದ ಆಡಳಿತಕ್ಕೆ ಡಿವೈಎಫ್‌ಐ ಸಂಘಟನೆ ಪ್ರತಿಭಟನೆಯ ಬಿಸಿ ಮುಟ್ಟಿಸಿದೆ. ಮೊದಮೊದಲು ಹಾರಿಕೆಯ ಉತ್ತರವನ್ನು ನೀಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಗಳು ಡಿಫಿ ಕಾರ್ಯಕರ್ತರ ತೀವ್ರ ಪ್ರತಿಭಟನೆಗೆ ಮಣಿದು ಚೆಕ್ ಮೂಲಕ ಬಿಲ್ ಮೊತ್ತ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.

2

500, 1000 ಮುಖಬೆಲೆಯ ನೋಟು ನಿಷೇಧ ಕ್ರಮದಿಂದ ಕಾಳದಂಧೆಕೋರರು, ಕಪ್ಪು ಹಣದ ಖದೀಮರು ಸಿಕ್ಕಿಬೀಳಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ ಅನಾಣ್ಯೀಕರಣದ ದಿನದಿಂದ ಈವರೆಗೆ ಜನಸಾಮಾನ್ಯರು ಬಲಿಯಾಗುತ್ತಿರುವ ವರದಿಗಳು ಮಾತ್ರವೇ ಕೇಳಿಬರುತ್ತಿವೆ. ದಿನಬಳಕೆಯ ವಸ್ತುವಿನಿಂದ ಹಿಡಿದು ಮದುವೆ, ಮುಂಜಿ, ಜೀವರಕ್ಷಕ ಔಷಧಿಯವರಗೆ ಅನಿವಾರ್ಯ ವಸ್ತುಗಳನ್ನು ಖರೀದಿಸಲಾಗದೆ ಜನತೆ ಪರಿತಪಿಸುತ್ತಿದ್ದಾರೆ,
ಈ ಗಾಯದ ಮೇಲೆ ಬರೆ ಎಳೆದಂತೆ ಆರೋಗ್ಯವನ್ನು ದಂಧೆಯನ್ನಾಗಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಸಹ ಹಳೆಯ ನೋಟು, ಚೆಕ್ ಗಳನ್ನು ಸ್ವೀಕರಿಸದೆ ರೋಗಿಗಳ ಕುಟುಂಬಗಳಿಗೆ ಚಿತ್ರಹಿಂಸೆ ನೀಡುತ್ತಿವೆ.
ಮಂಗಳೂರಿನ ಹಲವು ಆಸ್ಪತ್ರೆಗಳಲ್ಲಿಯೂ ಇಂತಹ ಸ್ಥಿತಿ ಇದ್ದು, ಕುಲಾಸೋ ಆಸ್ಪತ್ರೆಯಲ್ಲಿ ಹೊಸ ನೋಟು ನೀಡದ ಕಾರಣ ರೋಗಿಗಳನ್ನು ಡಿಸ್ಚಾರ್ಜ್ ಮಾಡದೆ ಅಕ್ರಮ ಬಂಧನದಲ್ಲಿಡಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ DYFI ಕಾರ್ಯಕರ್ತರು ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯ ಈ ಧೋರಣೆಯಿಂದ ಹದಿನೈದಕ್ಕೂ ಹೆಚ್ಚು ಅಸಹಾಯಕ ರೋಗಿಗಳು ಬವಣೆ ಪಡುತ್ತಿದ್ದುದು ಕಂಡುಬಂತು. ವೈದ್ಯರು ಡಿಸ್ಚಾರ್ಜ್ ಮಾಡಲು ಹೇಳಿದ್ದರೂ ಹೊಸನೋಟು ಇಲ್ಲದ ಕಾರಣ ಕಳೆದ ಮೂರು ದಿವಸಗಳಿಂದ ಅವರನ್ನು ಬಿಡುಗಡೆಗೊಳಿಸದೆ ಅನಧಿಕೃತ ಬಂಧನದಲ್ಲಿಡಲಾಗಿತ್ತು. ಈ ಕುರಿತು ಆಸ್ಪತ್ರೆ ಆಡಳಿತ, ಆರೋಗ್ಯಾಧಿಕಾರಿ, ಜಿಲ್ಲಾಡಳಿತದ ಜೊತೆಗೆ ಮಾತುಕತೆ ನಡೆಸಿದರೂ ಆಡಳಿತ ಮಂಡಳಿ ತೀರಾ ಅಮಾನವೀಯವಾಗಿ ನಡೆದು ಕೊಂಡಿತು.
ಆದರೆ ಪಟ್ಟುಬಿಡದ DYFI ಕಾರ್ಯಕರ್ತರು ಸ್ಥಳದಲ್ಲಿಯೇ ತೀವ್ರ ಪ್ರತಿಭಟನೆ ನಡೆಸಿ, ಚಿಕಿತ್ಸೆ ಮುಗಿದ ರೋಗಿಗಳನ್ನು ಸ್ವತಃ ಬಿಡುಗಡೆಗೊಳಿಸುವ ಕಾರ್ಯಾಚರಣೆಗಿಳಿಯಿತು. ಈ ಪ್ರತಿರೋಧದಿಂದ ಮೆತ್ತಗಾದ ಆಸ್ಪತ್ರೆಯ ಆಡಳಿತ ಮಂಡಳಿ ಕೊನೆಗೂ ಚೆಕ್ ಮೂಲಕ ಬಿಲ್ ಪಾವತಿಯನ್ನು ಪಡೆಯಲು ಒಪ್ಪಿಕೊಂಡಿತು.


Spread the love

Exit mobile version