ಕೊಲೆಗಡುಕರ ಜೊತೆ ಪಿತೂರಿದಾರರನ್ನೂ ಬಂಧಿಸಬೇಕು: ಸಚಿವ ರಮಾನಾಥ ರೈ
ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ಕೊಲೆಗಡುಕರ ಜೊತೆ ಕೃತ್ಯ ಎಸಗಲು ಪ್ರಚೋದನೆ ನೀಡಿದವರನ್ನೂ ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕೊಲೆ ಕೃತ್ಯ ಎಸಗಲು ಪ್ರಚೋದನೆ ನೀಡಿದವರ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದೇನೆ. ಜಿಲ್ಲೆಯ ಪೊಲೀಸರ ಜೊತೆಗೂ ಮಾತನಾಡಿದ್ದೇನೆ.
ನನ್ನ ಜೊತೆ ಕೊಲೆಗಡುಕರು ಇಲ್ಲ. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಲ್ಲಡ್ಕ ಇಸ್ಮಾಯಿಲ್ ಕೊಲೆಯಲ್ಲಿ ಭಾಗಿಯಾದ ಆರೋಪ ಇತ್ತು. ಆ ಬಳಿಕ ಅವರು ಖುಲಾಸೆ ಆಗಿರಬಹುದು. ಮಿಥುನ್ ಕಲ್ಲಡ್ಕ, ಭುವಿತ್ ಶೆಟ್ಟಿ, ರತ್ನಾಕರ ಶೆಟ್ಡಿಯಂತಹ ಕೊಲೆ ಆರೋಪಿಗಳನ್ನು ಬೆಂಬಲಿಸಿದ್ದಾರೆ ಅವರು. ಅಶ್ರಫ್ ಕೊಲೆ ಪ್ರಕರಣದ ಆರೋಪಿ ಭರತ್ ಪ್ರಭಾಕರ ಭಟ್ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು’ ಎಂದು ವಾಗ್ದಾಳಿ ನಡೆಸಿದರು.
ನಾನು ಎಲ್ಲಾ ಜಾತಿ ಧರ್ಮದ ಜೊತೆ ಅನ್ಯೊನ್ಯತೆಯಿಂದ ಇದ್ದು, ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಇದನ್ನು ಸಹಿಸಲು ಸಾಧ್ಯವಾಗದ ಮತೀಯ ಶಕ್ತಿಗಳು ನನ್ನನ್ನು ಗುರಿ ಮಾಡಿಕೊಂಡು ಮಾತನಾಡುತ್ತಿವೆ. ಜಿಲ್ಲೆಯ ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಜೊತೆ ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಅಲ್ಲದೆ ನನ್ನ ಮಾತಿಗೆ ಈಗಲೂ ನಾನು ಬದ್ಧನಿದ್ದೇನೆ. ನಾನು ಬಂಟ್ವಾಳ ೈಬಿಯಲ್ಲಿ ಎಸ್ಪಿಯವರ ಜೊತೆಯಲ್ಲಿ ಮಾತನಾಡಿದ ವೀಡಿಯೋ ಮಾಡಿ ಅದರ ಒಂದು ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗಿದೆ. ಅದನ್ನೇ ಮುಂದಿಟ್ಟುಕೊಂಡು ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ ವಾಸ್ತವ ವಿಚಾರವನ್ನು ಮಾತ್ರ ಮರೆ ಮಾಚಲಾಗಿದೆ ಎಂದರು.
ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಇಬ್ರಾಹಿಂ ಕೋಡಿಜಾಲ್, ಪದ್ಮನಾಭ ನರಿಂಗಾನ, ಶಾಲೆಟ್ ಪಿಂಟೊ ಹಾಗೂ ಇತರರು ಉಪಸ್ಥಿತರಿದ್ದರು.