ಕೊಲೆ ಯತ್ನ ಪ್ರಕರಣದ ಆರೋಪಿಗಳ ಬಂಧನ
ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಬೋಂದೆಲ್ ನಿವಾಸಿಗಳಾದ ನಿತಿನ್ ಶೆಟ್ಟಿ (23) ಹಾಗೂ ಗೌರವ್ (24) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಎಪ್ರಿಲ್ 26 ರಂದು ಮಂಗಳೂರು ಪೆರ್ಮನ್ನೂರು ಗ್ರಾಮದ ಕಲ್ಲಾಪು ಪಟ್ನ ನಿವಾಸಿ ಸಫ್ವಾನ್ ಹಸನ್ ರವರು ತನ್ನ ಮನೆಯಿಂದ ಕೆಎ-19-ಇಇ-6817 ನೇ ಬೈಕ್ ನಲ್ಲಿ ಮನೆಯಿಂದ ಹೊರಟು ರಸ್ತೆಗೆ ಬಂದ ಕೂಡಲೇ ಎರಡು ದ್ವಿಚಕ್ರ ವಾಹನದಲ್ಲಿ ಬಂದ 4 ಮಂದಿ ಯುವಕರು ಸಫ್ವಾನ್ ಹಸನ್ ರವರ ಬೈಕ್ ನ್ನು ಹಿಂಬಾಲಿಸಿ ಅವರಿಗೆ ತಲವಾರಿನಿಂದ ತಲೆಗೆ ಕುತ್ತಿಗೆಗೆ ಕೈಗೆ ಕಡಿದು ಗಂಭೀರ ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದು ತೀವ್ರ ಗಾಯಗೊಂಡ ಸಫ್ವಾನ್ ಹಸನ್ ರವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಸಫ್ವಾನ್ ಹಸನ್ ರವರ ತಮ್ಮ ಅಕ್ಬರ್ ಜುನೈದ್ ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ: 227/2016 ಕಲಂ 326, 307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾದ 4 ಮಂದಿಯನ್ನು ಈಗಾಗಲೇ ದಸ್ತಗಿರಿ ಮಾಡಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಸುರತ್ಕಲ್ ಬಳಿಯಿಂದ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಆರೋಪಿಗಳ ಪೈಕಿ ನಿತಿನ್ ಶೆಟ್ಟಿ ಎಂಬಾತನು ಈ ಹಿಂದೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾ ಬಳಿಯಲ್ಲಿ ನಂದಕುಮಾರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಗೌರವ್ ಎಂಬಾತನು ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾದಲ್ಲಿ ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಅಲ್ಲದೇ ಆರೋಪಿಗಳಿಬ್ಬರು ಮೂಡಬಿದ್ರಿ ಮಹಾವೀರ ಕಾಲೇಜು ಬಳಿಯಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆದ ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿರುತ್ತಾರೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.