ಕೊಲ್ಯ ಮಠದ ರಮಾನಂದ ಸ್ವಾಮೀಜಿ ನಿಧನ; ಗಣ್ಯರ ಸಂತಾಪ

Spread the love

ಮಂಗಳೂರು: ಶ್ರೀ ಮೂಕಾಂಬಿಕ ಮಠ ಕೊಲ್ಯ ಇದರ ಶ್ರೀ ರಮಾನಂದ ಸ್ವಾಮೀಜಿ ಅವರು ಅಸೌಖ್ಯದಿಂದ ಸೋಮವಾರ ನಗರದ ವಿನಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತ ಸ್ವಾಮೀಜಿಗೆ 66 ವರ್ಷ ವಯಸ್ಸಾಗಿತ್ತು.

kolya-ramananda-swamiji-passedaway-20160523

ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿ ಅವರು ನಗರದ ವಿನಯ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಚಿಕಿತ್ಡೆ ಫಲಕಾರಿಯಾಗದೆ ಮೃತರಾಗಿದ್ದಾರೆ
ಮೃತ ಸ್ವಾಮೀಜಿಯ ನಿಧನಕ್ಕೆ ನಾಡಿನ ಹಲವು ಗಣ್ಯರು ಕಂಬನಿ ಸುರಿಸಿದ್ದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ತಮ್ಮ ಸಂತಾಪ ಸಂದೇಶದಲ್ಲಿ ಕೊಲ್ಯ ರಮಾನಂದ ಸ್ವಾಮಿಜಿಯವರು ಬಡಜನತೆಯ ಬಗ್ಗೆ ಅಪಾರ ಅನುಕಂಪವುಳ್ಳ ಸಹೃದಯ ವ್ಯಕ್ತಿತ್ವವು ಅವರದಾಗಿದೆ. ಕರಾವಳಿಯ ಯಾವುದೇ ಪ್ರದೇಶದಲ್ಲಿ ಸಂಕಷ್ಟ ಅನಾಹುತಗಳಾದಾಗ ಅಲ್ಲಿಗೆ ಹೋಗಿ ಅವರಿಗೆ ಸಾಂತ್ವನ ಹೇಳಿ ಸಹಾಯ ನೀಡುವ ಉದಾರ ಹೃದಯ ಅವರದಾಗಿದೆ. ಕರಾವಳಿಯಲ್ಲಿ ಹಿಂದೂ ಧರ್ಮದ ಜಾಗೃತಿಯ ಬಗ್ಗೆಯೂ ವಿಶೇಷ ಕೊಡುಗೆಯನ್ನು ಅವರು ನೀಡಿದ್ದಾರೆ. ಅವರ ಅಗಲಿಕೆಯಿಂದ ನಮ್ಮ ಕರಾವಳಿಗೆ ಧಾರ್ಮಿಕ ಸಾಮಾಜಿಕ ದೃಷ್ಷಿಯಿಂದ ವಿಶೇಷ ನಷ್ಟವಾಗಿದೆ. ಅವರು ನಮ್ಮಲ್ಲಿ ತೋರಿದ ವಿಶೇಷ ಅಭಿಮಾನವನ್ನು ಸ್ಮರಿಸಿ ಅವರ ಬಗ್ಗೆ ಶ್ರೀ ಕೃಷ್ಣನಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಮ್ಮ ಶೋಕ ಸಂದೇಶದಲ್ಲಿ ಕೊಲ್ಯದ ಶ್ರೀ ಮೂಕಾಂಬಿಕ ಪೀಠದ ಸದ್ಗುರುಗಳಾದ ಶ್ರೀ ರಮಾನಂದ ಸ್ವಾಮೀಜಿಯವರ ನಿಧನ ಇಡೀ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ದೀನ ದಲಿತರಿಗೆ ಏಳಿಗೆಗೆ ಸಹಾಯ ಹಸ್ತ ಚಾಚುವ ಮೂಲಕ ಸಾಮಾಜಿಕ ಸೇವೆಯಿಂದ ಭಕ್ತರ ಮನವನ್ನು ಗೆದ್ದಿದ್ದ ಶ್ರೀಯವರ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಮೇಲ್ಪಂಕ್ತಿ. ಹಿಂದೂ ಸಮಾಜದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಗಳು ಸಂಘ ಪರಿವಾರದ ಚಟುವಟಿಕೆಗಳಿಗೆ ಸದಾ ಬೆಂಬಲವಾಗಿರುತ್ತಿದ್ದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಗೋಹತ್ಯೆ ವಿರೋಧಿಸುವ ಮೂಲಕ ಹಿಂದೂ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದ್ದರು. ಶ್ರೀಗಳ ನಿಧನದ ಸುದ್ದಿ ಅವರ ಅಪಾರ ಭಕ್ತ ಸಮೂಹಕ್ಕೆ ಅತೀವ ದು:ಖವನ್ನು ತಂದಿಟ್ಟಿದೆ. ಅವರ ಭಕ್ತ ಸಮೂಹಕ್ಕೆ ಶ್ರೀಗಳ ಅಗಲುವಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅನುಗ್ರಹಿಸಲಿ ಎಂದು ಹಾರೈಸಿದ್ದಾರೆ.


Spread the love