ಕೊಲ್ಲೂರಿಗೆ ಗೋವಾ ಸಿ.ಎಂ ಡಾ. ಪ್ರಮೋದ್ ಸಾವಂತ್ ಭೇಟಿ
ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಗುರುವಾರ ಬೆಳಿಗ್ಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ಸಾವಂತ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಗೋವಾದಿಂದ ಬೈಂದೂರಿಗೆ ರೈಲಿನಲ್ಲಿ ಮುಂಜಾನೆ ಆಗಮಿಸಿದ ಅವರನ್ನು ಶಾಸಕ ಗುರುರಾಜ್ ಗಂಟಿಹೊಳೆ ಬರಮಾಡಿಕೊಂಡರು. ಬಳಿಕ ಕೊಲ್ಲೂರಿಗೆ ತೆರಳಿದ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ಸಾವಂತ್ ಅವರಿಗೆ ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ಹಾಗೂ ಸುರೇಶ್ ಭಟ್ ನೇತ್ರತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಶ್ರೀದೇವಿಯ ದರ್ಶನ ಪಡೆದುಕೊಂಡ ಬಳಿಕ, ಋತ್ವೀಜರ ನೇತ್ರತ್ವದಲ್ಲಿ ನಡೆದ ಚಂಡಿಕಾ ಹೋಮ ಹಾಗೂ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಶಾಸಕ ಗುರುರಾಜ್ ಗಂಟಿಹೊಳೆ, ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಭಟ್ ಮುಂತಾದವರಿದ್ದರು.
ಪೂರ್ಣಾಹುತಿಯ ನಂತರ ದೇವಸ್ಥಾನದ ವತಿಯಿಂದ ಮುಖ್ಯಮಂತ್ರಿಗಳನ್ನು ಗೌರವಿಸಲಾಯಿತು. ಪ್ರಸಾದ ಸ್ವೀಕರಿಸಿದ ಅವರು ಕೊಲ್ಲೂರಿನಿಂದ ಉಡುಪಿಗೆ ಪ್ರಯಾಣ ಬೆಳೆಸಿದರು.