ಕೊಲ್ಲೂರಿಗೆ ಬಂದು ಗಂಟೆ ಬಾರಿಸಿ ಪ್ರಮಾಣ ಮಾಡಲಿ: ಶಾಸಕ ಬಿಎಮ್ಎಸ್ ಗೆ ಮಾಜಿ ಶಾಸಕ ಗೋಪಾಲ ಪೂಜಾರಿ ಸವಾಲು
ಕುಂದಾಪುರ: ವಂಡ್ಸೆ ಗ್ರಾ.ಪಂ.ನಿಂದ ನಡೆಸಲ್ಪಡುತ್ತಿದ್ದ, ನೂರಾರು ಮಂದಿ ಮಹಿಳೆಯರಿಗೆ ವರದಾನವಾಗಿದ್ದ ವಂಡ್ಸೆಯ ಸ್ವಾವಲಂಬನಾ ಹೊಲಿಗೆ ವೃತ್ತಿ ತರಬೇತಿ ಕೇಂದ್ರವನ್ನು ರಾತ್ರೋ-ರಾತ್ರಿ ಮುಚ್ಚಿಸಿರುವುದು ಅಕ್ಷಮ್ಯ. ಕ್ಷೇತ್ರದ ಶಾಸಕರು ಅಧಿಕಾರಿಗಳಿಗೆ ಒತ್ತಡ ಹೇರಿ ಪಂಚಾಯತ್ ರಾಜ್ ಕಾಯ್ದೆಯನ್ನು ಗಾಳಿಗೆ ತೂರಿ ಸ್ವಾವಲಂಬಿಯಾಗಿ ಬದುಕುತ್ತಿರುವ ಮಹಿಳೆಯರನ್ನು ಬೀದಿಗೆ ತಳ್ಳಿರುವುದು ಖಂಡನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ವಂಡ್ಸೆಯ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಮತ್ತು ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾ| ಸಮಿತಿ ಕುಂದಾಪುರ ಆಶ್ರಯದಲ್ಲಿ ಸೋಮವಾರ ಕಟ್ಬೆಲ್ತೂರು ಗ್ರಾ.ಪಂ. ಬಳಿ ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
ಆದಷ್ಟು ಬೇಗ ಈ ನೊಂದ ಮಹಿಳೆಯರು, ಪಂಚಾಯತ್ನವರು ಹಾಗೂ ಅಽಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಮಾತನಾಡಿ. ಸಂತ್ರಸ್ತರಿಗೆ ನ್ಯಾಯ ಕೊಡಿಸಿ. ಇಲ್ಲದಿದ್ದರೆ ನಾವು ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಬಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಉದಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ವಂಡ್ಸೆ ಪಂಚಾಯತ್ ಮಾದರಿ ಪಂಚಾಯತ್ ಆಗಿ ರೂಪುಗೊಂಡಿದೆ. ಸ್ವಚ್ಛತೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ. ಇಲ್ಲಿ ಆಡಳಿತ ನಡೆಸುತ್ತಿರುವವರು ಕಾಂಗ್ರೆಸ್ ನವರು ಎಂಬ ಒಂದೇ ವಿಚಾರಕ್ಕೆ ಇ ರೀತಿಯಾಗಿ ಶಾಸಕರು ದ್ವೇಷ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲ ಜನರನ್ನು ಸಮಾನವಾಗಿ ಕಾಣುವುದು ಶಾಸಕರ ಕರ್ತವ್ಯ. ಕಳೆದ ಬಾರಿ ಮತ ಕೇಳುವಾಗ ಏರ್ಪೋರ್ಟ್, ಮೆಡಿಕಲ್ ಕಾಲೇಜು, ಐದು ನದಿಗಳ ಜೋಡಣೆ ಮಾಡುತ್ತೇನೆಂದ ಆಶ್ವಾಸನೆ ನೀಡಿರುವ ಶಾಸಕರು ಇದೀಗ ಎರಡುವರೆ ವರ್ಷ ಕಳೆದರೂ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದೆ ವಚನಭ್ರಷ್ಟರಾಗಿದ್ದಾರೆ. ಸೌಕೂರು ಏತ ನೀರಾವರಿ ಯೋಜನೆ ತರುವಲ್ಲಿ ನನ್ನ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟರ ಶ್ರಮವೂ ಇದೆ. ಒಂದು ವೇಳೆ ಸೌಕೂರು ಏತ ನೀರಾವರಿ ಯೋಜನೆಯಲ್ಲಿ ನಮ್ಮಿಬ್ಬರ ಶ್ರಮ ಇಲ್ಲ ಎಂದು ಹೇಳುವುದಾದರೆ ಶಾಸಕರು ಕೊಲ್ಲೂರು ಕ್ಷೇತ್ರಕ್ಕೆ ಬಂದು ಗಂಟೆ ಭಾರಿಸಿ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹಾಲಿ ಶಾಸಕ ಸುಕುಮಾರ್ ಶೆಟ್ಟರಿಗೆ ಸವಾಲು ಹಾಕಿದರು.
ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡಬೇಕು. ಗೆದ್ದ ನಂತರ ಇಡೀ ಕ್ಷೇತ್ರಕ್ಕೆ ನೀವು ಶಾಸಕರು. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲ ಜನರನ್ನು ಸಮಾನವಾಗಿ ಕಾಣುವುದು ಕರ್ತವ್ಯ. ನಮ್ಮ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನೊಂದ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಬೈಂದೂರು ಕ್ಷೇತ್ರ, ಕುಂದಾಪುರ ಕ್ಷೇತ್ರ, ಜಿಲ್ಲಾ ಮಟ್ಟದವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಎಚ್ಚರಿಸಿದರು.
ರೈತ ಮುಖಂಡ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಆಡಳಿತವಿರುವ ಪಂಚಾಯತ್ ನಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಶಾಸಕರು ಹಾಗೂ ಅವರ ಜೊತೆಗಾರರು ಅಡ್ಡಗಾಲು ಹಾಕುತ್ತಿರುವುದು ದುರಂತ. ಕಟ್ ಬೇಲ್ತೂರ ಗ್ರಾ.ಪಂ ನೂತನ ಕಟ್ಟಡಕ್ಕೂ ಬಿಜೆಪಿ ಸದಸ್ಯನೋರ್ವ ತಡೆ ಹಾಕಿದ್ದಾನೆ. ದಲಿತರ ರುದ್ರಭೂಮಿಗೆ ಜಾಗ ಮೀಸಲಿಟ್ಟರೆ ಅದಕ್ಕೂ ತಡೆ ಹಾಕಲಾಗಿದೆ. ಇದು ನಮ್ಮನ್ನು ಕುಗ್ಗಿಸುವ ತಂತ್ರ. ಇವ್ಯಾವುದಕ್ಕೂ ನಾವು ತಲೆಕಡಿಸಿಕೊಳ್ಳುವುದಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲೇ ಕಟ್ ಬೇಲ್ತೂರು ಪಂಚಾಯತ್ ಎರಡನೇ ಸ್ಥಾನದಲ್ಲಿದೆ. ತಮ್ಮ ಕಾನೂನುಬಾಹಿರ ಕೆಲಸಗಳಿಗೆ ಸಹಕಾರ ಕೊಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಇಲ್ಲಿನ ಪ್ರಾಮಾಣಿಕ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ಶಾಸಕರು ವರ್ಗಾವಣೆ ಮಾಡಿಸಿದ್ದಾರೆ ಎಂದು ಶರತ್ ಕುಮಾರ್ ಶೆಟ್ಟಿ ಆರೋಪಿಸಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ಮಾತನಾಡಿ, ಬೈಂದೂರು ಶಾಸಕರಿಗೆ ಮೊದಲು ಪಂಚಾಯತ್ ರಾಜ್ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟು ಅಧ್ಯಯನ ಮಾಡಲು ಹೇಳಬೇಕು. ಶಾಸಕರು ಅವರವರ ಇತಿಮಿತಿಯೊಳಗೆ ಕಾರ್ಯ ನಿರ್ವಹಿಸಬೇಕು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾ.ಪಂ, ತಾ.ಪಂ, ಜಿ.ಪಂ ಎಂಬ ಮೂರು ಸ್ತರಗಳಿದ್ದು, ಅದಕ್ಕೆ ಅದರದ್ದೇ ಆದ ಕಾಯ್ದೆಗಳಿವೆ. ಓರ್ವ ಶಾಸಕರಾದವರು ಅದರ ಇತಿಮಿತಿ ಅರಿಯದಿರುವುದು ದುರಂತ. ಸ್ಥಳೀಯಾಡಳಿತವಾದ ಗ್ರಾ.ಪಂನಲ್ಲಿ ನಿರ್ಣಯವಾದ ವಿಚಾರವನ್ನು ಯಾವೊಬ್ಬ ಅಧಿಕಾರಿ ಅಥವಾ ಮೇಲ್ಸ್ತರದ ಜನಪ್ರತಿನಿಧಿಗಳು ಅಡ್ಡಗಾಲು ಹಾಕುವಂತಿಲ್ಲ. ಆದರೆ ಇವೆಲ್ಲವನ್ನೂ ಮೀರಿ ಶಾಸಕರು ಹಿಟ್ಲರ್ ಧೋರಣೆ ಅನುಸರಿಸುತ್ತಿರಿವುದು ಸರಿಯಲ್ಲ. ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರದ ಮಹಿಳೆಯರಿಗೆ ಆದ ಸಮಸ್ಯೆ ಬಗೆಹರಿಸಬೇಕು. ಆ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಪ.ಜಾತಿ, ಪ.ಪಂಗಡ ಸಮುದಾಯದ ಮಹಿಳೆಯರಿಗೆ ಅನ್ಯಾಯವಾಗಿದ್ದು, ಅವರು ದೂರ ಕೊಡುವುದಾದರೆ ದಸಂಸ ಭೀಮಘರ್ಜನೆಯಿಂದ ರಾಜ್ಯದಾದ್ಯಂತ ಹೋರಾಟ ನಡೆಸಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವಂಡ್ಸೆ ಗ್ರಾ.ಪಂ ಮಾಜಿ ಅಧ್ಯಲ್ಷ ಉದಯ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಯೂತ್ ಕಾಂಗ್ರೆಸ್ ನ ಪ್ರಶಾಂತ್ ಪೂಜಾರಿ ಕರ್ಕಿ ಮುಖಂಡರಾದ ನಾಗಪ್ಪ ಕೊಠಾರಿ, ಮಂಜುಳಾ ದೇವಾಡಿಗ, ಶ್ರೀನಿವಾಸ ಗಾಣಿಗ, ಚಂದ್ರ ನಾಯ್ಕ್, ಶೇಖರ್ ಬಳೆಗಾರ್, ಕೃಷ್ಣಮೂರ್ತಿ ರಾವ್, ಶರತ್ಚಂದ್ರ ಶೆಟ್ಟಿ, ತಾ.ಪಂ. ವಾಸುದೇವ ಪೈ, ಸದಸ್ಯ ಉದಯ ಪೂಜಾರಿ, ಸಂತೊಷ್ ಕುಮಾರ್ ಶೆಟ್ಟಿ ಬಲಾಡಿ, ಮತ್ತಿತರರು ಉಪಸ್ಥಿತರಿದ್ದರು.