ಕೊಲ್ಲೂರಿನಲ್ಲಿ ಬಸ್ಸು ಡಿಕ್ಕಿ ಹೊಡೆದು ಯುವಕ ಸಾವು
ಕುಂದಾಪುರ: ನವರಾತ್ರಿಯ ಸಾಲು ರಜೆಯಿರುವ ಕಾರಣ ಬೈಕ್‌ನಲ್ಲಿ ಊರಿಗೆ ಮರಳುತ್ತಿರುವ ಸಂದರ್ಭ ಬಸ್ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಖೇದಕರ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಕಲ್ ಎಂಬಲ್ಲಿ ಘಟಿಸಿದೆ.
ಮೃತ ಯುವಕನನ್ನು ಕೋಟೇಶ್ವರ ಹಂಗಳೂರು ನಿವಾಸಿ ಪ್ರವೀಣ್ ಜಿ. ಶ್ರೀಯಾನ್ ಎಂದು ಗುರುತಿಸಲಾಗಿದೆ.
ಸಾಗರದ ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಪ್ರವೀಣ್ ದಸರಾ ರಜೆ ನಿಮಿತ್ತ ಕೋಟೇಶ್ವರದ ತಮ್ಮ ನಿವಾಸಕ್ಕೆ ಬೈಕಿನಲ್ಲಿ ಆಗಮಿಸುತ್ತಿದ್ದ ವೇಳೆ ಬಸ್ಸು ಢಿಕ್ಕಿ ಹೊಡೆದಿತ್ತು. ಯಾವಾಗಲೂ ಪ್ರವೀಣ್ ಊರಿಗೆ ಬರುವಾಗ ಬಸ್ಸಿನಲ್ಲೇ ಬರುತ್ತಿದ್ದರು. ಆದರೆ ಈ ಬಾರಿ ಮಾತ್ರ ಬೈಕ್ ಮೂಲಕ ಬಂದಿದ್ದರು.
ಬಸ್ಸು ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.