ಕೊಲ್ಲೂರು: ಆರ್ದ್ರಾ ಆರ್ಭಟಕ್ಕೆ ಗುಡ್ಡ ಕುಸಿದು ಮಹಿಳೆ ಸಾವು

Spread the love

ಕೊಲ್ಲೂರು: ಆರ್ದ್ರಾ ಆರ್ಭಟಕ್ಕೆ ಗುಡ್ಡ ಕುಸಿದು ಮಹಿಳೆ ಸಾವು

ಕುಂದಾಪುರ: ಕಳೆದ ರಾತ್ರಿಯಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಸಮೀಪದಲ್ಲಿನ ಗುಡ್ಡ ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ ದಾರುಣ ಘಟನೆ ಕೊಲ್ಲೂರು ಸಮೀಪದ ಸೊಸೈಟಿ ಗುಡ್ಡೆ ಎಂಬಲ್ಲಿ ಗುರುವಾರ ಸಂಜೆ ನಡೆಡಿದೆ.

ಹಳ್ಳಿಬೇರು ಗ್ರಾಮದ ಪುಟ್ಟ ಎಂಬವರ ಪತ್ನಿ ಅಂಬಾ (48) ಮೃತ ಮಹಿಳೆ.

ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುವ ದಾರಿಯಲ್ಲಿ ಸೊಸೈಟಿ ಗುಡ್ಡೆ ಎಂಬಲ್ಲಿ ಇರುವ ಕೊಲ್ಲೂರಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಅಡಿಗ ಎನ್ನುವವರ ಮನೆಗೆ ಸಮೀಪದ ಹಳ್ಳಿ ಬೇರು ಗ್ರಾಮದ ಪುಟ್ಟ ಎನ್ನುವವರ ಪತ್ನಿ ಅಂಬಾ ಮನೆಕೆಲಸಕ್ಕೆ ಬರುತ್ತಿದ್ದರು. ಗುರುವಾರವೂ ಮನೆ ಕೆಲಸ ಮುಗಿಸಿ ಊಟ ಮಾಡಿ ಸುಮಾರು 3.15 ರ ವೇಳೆಗೆ ಮನೆಯ ಹಿಂಭಾಗಕ್ಕೆ ತೆರಳಿದ್ದ ವೇಳೆಯಲ್ಲಿ ಅಂದಾಜು 60 ಅಡಿ ಎತ್ತರದ ಗುಡ್ಡ ಕುಸಿದು ಮಣ್ಣಿನ ರಾಶಿಯಲ್ಲಿ ಹೂತು ಹೋಗಿದ್ದರು.

ವಿಷಯ ತಿಳಿದ ಕೊಲ್ಲೂರಿನ ಟ್ಯಾಕ್ಸಿ ಹಾಗೂ ಜೀಪ್ ಚಾಲಕ ಅಸೋಸೀಯೇಶನ್ ಸದಸ್ಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. ಸಂಘದ ಸದಸ್ಯ ಡ್ರೈವರ್ ಅನಿ ಅವರ ಪ್ರಯತ್ನದಿಂದ ಮಹಿಳೆಯನ್ನು ರಕ್ಷಣೆ ಮಾಡಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಮೃತ ಮಹಿಳೆಗೆ ಇಬ್ಬರು ಗಂಡು ಹಾಗೂ ಓರ್ವ ಪುತ್ರಿ ಇದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರದ ಉಪ ವಿಭಾಗಾಧಿಕಾರಿ ರಶ್ಮೀ ಎಸ್‌.ಆರ್, ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸವಿತ್ರತೇಜ್, ತಹಶೀಲ್ದಾರ್ ಪ್ರದೀಪ್, ಕೊಲ್ಲೂರು ಠಾಣಾಧಿಕಾರಿ ಜಯಶ್ರೀ ಭೇಟಿ ನೀಡಿದ್ದಾರೆ.


Spread the love