ಕೊಲ್ಲೂರು ದೇವಳದ ಊಟ ನೀಡಿ ಯಾವ ಪುರಷಾರ್ಥಕ್ಕೆ ಕಾಂಗ್ರೆಸಿಗರು ಸಮಾವೇಶ ಮಾಡುತ್ತೀರಿ : ಯಶ್‍ಪಾಲ್ ಸುವರ್ಣ
ಉಡುಪಿ: ರಾಜ್ಯದ ಜನರಿಗೆ ನಿತ್ಯವೂ ಮೂರು ಹೊತ್ತಿನ ಅನ್ನ ಹಾಕುವವನು ನಾನೇ ಎಂದು ಪ್ರಚಾರ ಪಡೆಯುತ್ತಿರುವ ಅನ್ನಭಾಗ್ಯ ಶೂರ ಸಿದ್ದರಾಮಯ್ಯ ತನ್ನ ಕಾರ್ಯಕರ್ತರ ಹಸಿವು ತಗ್ಗಿಸಲು ಕೊಲ್ಲೂರು ಮೂಕಾಂಬಿಕೆಯ ಭಕ್ತರ ಕಾಣಿಕೆ ದುಡ್ಡಿಗೆ ಕನ್ನ ಹಾಕಿದ್ದು ನಿಜಕ್ಕೂ ದುರ್ದೈವಕರ. ತನ್ನ ಕಾರ್ಯಕರ್ತರಿಗೆ ಊಟ ಹಾಕುವ ಯೋಗ್ಯತೆ ಇಲ್ಲದ ಸ್ಥಳೀಯ ಕಾಂಗ್ರೆಸ್ ನಾಯಕರು ಸಮಾವೇಶ ಮಾಡಿರುವುದಾದರೂ ಯಾವ ಪುರುಷಾರ್ಥಕ್ಕಾಗಿ ಎಂದು ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ದ್ವೇಷವನ್ನೇ ರಕ್ತಗತ ಮಾಡಿಕೊಂಡಿರುವ ಈ ಮುಖ್ಯಮಂತ್ರಿ ಕೊಲ್ಲೂರಿನಿಂದ ಕೇವಲ 12 ಕಿಮಿ ದೂರದ ಅರೆಶಿರೂರಿನಲ್ಲಿ ಇಳಿದರೂ ದೇವಾಲಯಕ್ಕೆ ಭೇಟಿ ನೀಡಲಿಲ್ಲ. ಈ ಮುಖ್ಯಮಂತ್ರಿಗೆ ಮೂಕಾಂಬಿಕೆ ಬೇಡ ಆಕೆಯ ಹುಂಡಿಗೆ ಬಿದ್ದ ದುಡ್ಡು ಬೇಕು. ಜಗತ್ತಿನ ಮೂಲೆಮೂಲೆಯ ಗಣ್ಯರು ಕೊಲ್ಲೂರು ಮೂಕಾಂಬಿಕೆ ಮತ್ತು ಉಡುಪಿ ಕೃಷ್ಣನ ದರ್ಶನ ಪಡೆದು ಹೋಗಿದ್ದಾರೆ ಆದರೆ ಕರ್ನಾಟಕದ ಮುಖ್ಯಮಂತ್ರಿಗೆ ಮಾತ್ರ ಈ ಎರಡೂ ದೇವಾಲಯಗಳೆಂದರೆ ಅಲರ್ಜಿ.ಅಧಿಕಾರಕ್ಕೆ ಬಂದ ಮೇಲೆ ಅದೆಷ್ಟೋ ಬಾರಿ ಉಡುಪಿ ಜಿಲ್ಲೆಗೆ ಬಂದರೂ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಿಲ್ಲ.ಇದು ಹಿಂದೂ ಸಮಾಜಕ್ಕೆ ಸಿದ್ದರಾಮಯ್ಯ ಮಾಡಿದ ಘೋರ ಅವಮಾನ. ಇಷ್ಟಾದರೂ ಇವರ ಸಮಾವೇಶಕ್ಕೆ ಊಟ ಬೇಯಿಸಿ ಹಾಕಲು ಕೊಲ್ಲೂರು ದೇವಾಲಯ ಬೇಕು. ಕೊಲ್ಲೂರು ಕ್ಷೇತ್ರದಿಂದ ಕಲ್ಲಡ್ಕ ಮತ್ತು ಪುಣಚದ ಶಾಲಾಮಕ್ಕಳಿಗೆ ಸರಬರಾಜಾಗುತ್ತಿದ್ದ ಅನ್ನವನ್ನು ತಡೆ ಹಿಡಿದು ರಾಜ್ಯದ ಜನತೆಯಿಂದ ಉಗಿಸಿಕೊಂಡಿದ್ದ ಕಾಂಗ್ರೆಸಿಗರು ಈಗ ತಮ್ಮ ರಾಜಕೀಯ ಸಮಾವೇಶಕ್ಕೆ ದೇವಾಲಯದ ದುಡ್ಡನ್ನು ದುರುಪಯೋಗಪಡಿಸಿಕೊಂಡು ದರ್ಪ ಮೆರೆದಿದ್ದಾರೆ. ಇದರಲ್ಲಿ ಕಾಂಗ್ರೆಸಿಗರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಜಿಲ್ಲಾಧಿಕಾರಿ ಸಹಾಯಕ ಆಯುಕ್ತರು, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮೊದಲಾದವರು ಭಾಗಿಯಾಗಿದ್ದಾರೆ. ನಿಜಕ್ಕೂ ಈ ಅಧಿಕಾರಿಗಳಿಗೆ ನೈತಿಕತೆ ಇದ್ದರೆ ಕೂಡಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಅವರು ಆಗ್ರಹಿಸಿದ್ದಾರೆ
ದೇವರ ಅನ್ನಪ್ರಸಾದದ ಜೊತೆ ಮದ್ಯಾಹ್ನ ಚಿಕನ್ ಬಿರಿಯಾನಿಯನ್ನೂ ವಿತರಣೆ ಮಾಡಲಾಗಿದ್ದು, ಈ ಸೋಕಾಲ್ಡ್ ಜಾತ್ಯಾತೀತವಾದಿಗಳು ಮೂಕಾಂಬಿಕೆಯ ಅನ್ನಪ್ರಸಾದದ ಪಾವಿತ್ರ್ಯತೆಯನ್ನೂ ಮಣ್ಣು ಮಾಡಿದ್ದಾರೆ. ಮೀನು ತಿಂದು ದೇವಾಲಯಕ್ಕೆ ತೆರಳುವ ಮುಖ್ಯಮಂತ್ರಿ ಮತ್ತು ಅವರ ಹಿಂಬಾಲಕರಿಂದ ಇದಕ್ಕಿಂತ ಹೆಚ್ಚಿನದ್ದೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕೊಲ್ಲೂರಿನ ಧರ್ಮದರ್ಶಿಯಾಗಿರುವ ಕಾಂಗ್ರೆಸಿಗ ಹರೀಶ್ ಕುಮಾರ್ ಶೆಟ್ಟಿ ಡಿಕೆಶಿ ಆಪ್ತನಾಗಿದ್ದು ರಾಜಕೀಯ ಪ್ರಭಾವದಿಂದಲೇ ಈ ಹುದ್ದೆಯನ್ನು ಪಡೆದಿದ್ದಾರೆ.ಇವರು ದೇವಾಲಯವನ್ನು ಕಾಂಗ್ರೆಸಿಗರ ಪಿತ್ರಾರ್ಜಿತ ಆಸ್ತಿಯಂತೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ.
ಶಾಸಕ ಗೋಪಾಲ ಪೂಜಾರಿ ಕೂಡ ಕೆಎಸ್‍ಆರ್‍ಟಿಸಿಯ ಎಲ್ಲಾ ಬಸ್ಸುಗಳನ್ನು ಸಮಾವೇಶಕ್ಕೆ ಜನರನ್ನು ಸಾಗಾಟ ಮಾಡಲು ಬಳಸುವ ಮೂಲಕ ಜನರಿಗೆ ಅನ್ಯಾಯ ಮಾಡಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಂಚಾರ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಜಿಲ್ಲಾಡಳಿತದ ಪ್ರಾಯೋಜಕತ್ವದಲ್ಲಿ ಕಾಂಗ್ರೆಸಿನ ಚುನಾವಣಾ ಪೂರ್ವಭಾವಿ ಸಮಾವೇಶ ಜಿಲ್ಲೆಯಲ್ಲಿ ನಡೆದಿದೆ. ಜನರ ದುಡ್ಡನ್ನು ದುರುಪಯೋಗಪಡಿಸಿ ರಾಜಕೀಯ ಸಮಾವೇಶ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಿದ್ದಾರೆ. ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಜನ ಒಟ್ಟು ಮಾಡುವುದೇ ಈ ಕಾಂಗ್ರೆಸಿಗರ ಪಾಲಿಗೆ ಒಂದು ಸಾಹಸವಾಗಿತ್ತು. ಪಂಚಾಯತ್ ಉಗ್ರಾಣಿಯಿಂದಾರಂಭಿಸಿ ಜಿಲ್ಲಾಧಿಕಾರಿವರೆಗೆ ಎಲ್ಲರಿಗೂ ಇಂತಿಷ್ಟು ಜನ ಸೇರಿಸಬೇಕು ಎಂದು ಕಾಂಗ್ರೆಸ್ ನಾಯಕರು ತಾಕೀತು ಮಾಡಿದ್ದರು ಎಂದು ತಿಳಿದು ಬಂದಿದೆ. ವಿವಿಧ ಯೋಜನೆಗಳ ವಿತರಣೆ ಲ್ಯಾಪ್ ಟಾಪ್, ಹಕ್ಕುಪತ್ರ ಮೊದಲಾದವುಗಳ ಆಮೀಷ ಒಡ್ಡಿ ಜನ ಸೇರಿಸಲಾಗಿದೆ. ಕೆಲವು ಕಡೆಗಳಲ್ಲಿ ಆಳಿಗೆ 300 ರುಪಾಯಿ ಕೊಟ್ಟು ಜನ ಕರೆಸಲಾಗಿದೆ ಒಂದು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸಿಗೆ ಇಂಥ ದುಸ್ಥಿತಿ ಬರಬಾರದಿತ್ತು ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಇಲಾಖೆಗಳ ದುರ್ಬಳಕೆಯನ್ನು ಪ್ರಶ್ನಿಸಿದಾಗ ಇದೊಂದು ಸರಕಾರದ ಕಾರ್ಯಕ್ರಮ ಎಂದು ಕಾಂಗ್ರೆಸಿಗರು ಸಮಾಜಾಯಿಷಿ ಕೊಡುತ್ತಿದ್ದಾರೆ. ಒಂದು ವೇಳೆ ಇದು ಸರಕಾರದ ಕಾರ್ಯಕ್ರಮವಾಗಿದ್ದರೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ವೇದಿಕೆಯಲ್ಲಿ ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.
ಅಹಿಂದದ ಹೆಸರು ಹೇಳುತ್ತಾ ಬಂದಿರುವ ಸಿದ್ದರಾಮಯ್ಯ ಕಟಪಾಡಿಯ ಬಿಲ್ಲವ ಭವನವನ್ನು ಉದ್ಘಾಟಿಸಿ ಅದರ ಒಳಗೂ ಕಾಲಿಡದೆ ಬಾಗಿಲಿನಿಂದಲೇ ವಾಪಾಸಾಗಿ ಕಾರ್ಯಕ್ರಮ ಆಯೋಜಕರಿಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ. ಇದು ಸಿದ್ದರಾಮಯ್ಯ ಇಡೀ ಬಿಲ್ಲವ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.