ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ
ಕುಂದಾಪುರ: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಶುಕ್ರವಾರ ಇಲ್ಲಿನ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ನವಚಂಡಿ ಹೋಮದಲ್ಲಿ ಪಾಲ್ಗೊಂಡರು.
ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಕೊಲ್ಲೂರು ದೇವಳಕ್ಕೆ 11.30ಕ್ಕೆ ತಮ್ಮ ಧರ್ಮಪತ್ನಿಯೊಂದಿಗೆ ಆಗಮಿಸಿದ ಅವರು ವಸತಿಗೃಹಕ್ಕೆ ತೆರಳಿ ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆದು ಬಳಿಕ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು. ಪಾರಾಯಣ, ಕಲಶ ಸ್ಥಾಪನೆ, ಪೂಜೆ ಪುನಸ್ಕಾರಗಳು ಗುರುವಾರ ಸಂಜೆಯಿಂದ ದೇವಳದಲ್ಲಿ ಆರಂಭಗೊಂಡಿದ್ದು, ಮತ್ತೆ ಶುಕ್ರವಾರ ಬೆಳಿಗ್ಗೆ 8ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನ 12 ಗಂಟೆಯ ತನಕ ನಡೆದ ನವಚಂಡಿ ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿದರು. ನಂತರ ದೇವರ ದರ್ಶನ ಪಡೆದು, ದೇವಿ ಸನ್ನಿಧಿಯಲ್ಲಿ ಮಹಾಪೂಜೆಯ ಸಂಕಲ್ಪ ಮಾಡಿ ಪ್ರಸಾದ ಪಡೆದರು. ಬಳಿಕ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಅವರನ್ನು ಸನ್ಮಾನಿಸಿದರು.
ಲಂಕಾ ಜನರ ಒಳಿತಿಗೆ, ರಾಜಕೀಯ ಕ್ಷೇತ್ರದಲ್ಲಿ ಯಾವುದೇ ತೊಂದರೆಗಳಾಗಬಾರದು ಮತ್ತು ದೇಶದ ಶ್ರೇಯಸ್ಸಿಗಾಗಿ ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಕೊಲ್ಲೂರು ಮೂಕಂಬಿಕೆ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಕಳೆದ ಬಾರಿ ಬಂದಾಗ ಮನಸ್ಸಲ್ಲಿ ಏನೋ ಪ್ರಾರ್ಥನೆ ಮಾಡಿಕೊಂಡಿರುವೆ ಈಡೇರಿದರೆ ಇನ್ನೊಮ್ಮೆ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತೇನೆ ಎಂದು ಹೋಗಿದ್ದರು. ಅಂತೆಯೇ ಶುಕ್ರವಾರ ಮತ್ತೆ ನವಚಂಡಿಹೋಮದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನವಚಂಡಿ ಹೋಮ ಮಾಡಿಸಿದರೆ ಒಳಿತಾಗುತ್ತದೆ ಎಂಬ ಕೇರಳದ ಜ್ಯೋತಿಷಿಯೋರ್ವರ ಸಲಹೆಯ ಮೇರೆಗೆ ಲಂಕಾ ಪ್ರಧಾನಿ ಕೊಲ್ಲೂರು ದೇವಳಕ್ಕೆ ಆಗಮಿಸಿ ನವಚಂಡಿ ಹೋಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಧರ್ಮದರ್ಶಿ ವಂಡಬಳ್ಳಿ ಜಯರಾಮ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊಲೊಂಬೋದಿಂದ ವಿಮಾನದ ಮೂಲಕ ನೇರವಾಗಿ ಬೆಂಗಳೂರಿಗೆ ಬಂದಿರುವ ಲಂಕಾ ಪ್ರಧಾನಿ ಸಿಂಘೆ, ಬೆಂಗಳೂರಿನಿಂದ ವಿಮಾನದ ಮೂಲಕವೇ ಮಂಗಳೂರಿಗೆ ಬಂದಿದ್ದಾರೆ. ಪೂರ್ವ ತಯಾರಿಯಂತೆ ಹೆಲಿಕಾಫ್ಟರ್ ಮೂಲಕ ಬೈಂದೂರು ಸಮೀಪದ ಅರೆಶಿರೂರು ಹೆಲಿಪ್ಯಾಡ್ಗೆ ಬಂದಿಳಿಯಬೇಕಿದ್ದ ಅವರು, ಶುಕ್ರವಾರ ಸುರಿದ ಭಾರೀ ಮಳೆಯಿಂದ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಫ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದರು. ಹೆಲಿಕಾಫ್ಟರ್ ಹಾರಾಟಕ್ಕೆ ಅಡಚಣೆಯಾದರೆ ಮೊದಲೇ ರಸ್ತೆ ಮಾರ್ಗದ ಸಿದ್ದತೆಯೂ ನಡೆಸಿಕೊಂಡಿದ್ದ ಜಿಲ್ಲಾಡಳಿತ ಲಂಕಾ ಪ್ರಧಾನಿಯವರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಸುಮಾರು 140ಕ್ಕೂ ಅಧಿಕ ಕಿಮಿ ರಸ್ತೆ ಮಾರ್ಗದ ಮೂಲಕ ಬರಮಾಡಿಕೊಂಡಿತು. ಮಳೆ ಸ್ವಲ್ಪ ಕಡಿಮೆಯಾಗಿದ್ದರಿಂದ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿ ಮಧ್ಯಾಹ್ನ 12.30ಕ್ಕೆ ದೇವಸ್ಥಾನದಿಂದ ತೆರಳಿದ ಲಂಕಾ ಪ್ರಧಾನಿ ಸಿಂಘೆ ಅರೆಶಿರೂರು ಹೆಲಿಪ್ಯಾಡ್ ಮೂಲಕವೇ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಹೆಚ್ಚುವರಿ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಲಂಕಾ ಪ್ರಧಾನಿಯ ಕೊಲ್ಲೂರು ದೇವಳ ಭೇಟಿಗೆ ಪತ್ರಕರ್ತರಿಗೆ ಮೊದಲು ಪಾಸ್ ನಿರಾಕರಿಸಲಾಗಿತ್ತು. ಒತ್ತಾಯದ ಬಳಿಕ ಮೂವರು ಛಾಯಾಚಿತ್ರಕಾರರು ಹಾಗೂ ಮೂವರು ಟಿವಿ ಕ್ಯಾಮೆರಾಮೆನ್ಗಳಿಗೆ ಜಿಲ್ಲಾಡಳಿತ ಪಾಸ್ ಅನ್ನು ನೀಡಿತ್ತು. ಲಂಕಾ ಪ್ರಧಾನಿ ಆಗಮನಕ್ಕೂ ಮೊದಲು ಪಾಸ್ ಹೊಂದಿದ ಆರು ಮಂದಿ ಪತ್ರಕರ್ತರಿಗೆ ದೇವಸ್ಥಾನದ ಒಳಗೆ ಫೋಟೋ, ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಸಿಂಘೆ ಆಗಮಿಸುವ 20 ನಿಮಿಷಕ್ಕೂ ಮೊದಲು ಪತ್ರಕರ್ತರನ್ನು ಹೊರಗೆ ಹೋಗುವಂತೆ ಭದ್ರತಾ ಸಿಬ್ಬಂದಿಗಳು ಸೂಚಿಸಿದ್ದು, ಫೋಟೋ ಹಾಗೂ ವಿಡಿಯೋ ತೆಗೆಯದಂತೆ ತಾಕೀತು ಮಾಡಿದರು. ಬಳಿಕ ಮಳೆಯಲ್ಲೇ ದೇವಳದ ಹೊರಗೆ ನಿಂತುಕೊಂಡ ಪತ್ರಕರ್ತರು ಲಂಕಾಪ್ರಧಾನಿ ದೇವಸ್ಥಾನದಿಂದ ತೆರಳುವವರೆಗೂ ದೂರದಲ್ಲೇ ನಿಂತು ಚಿತ್ರೀಕರಣ ಮಾಡಿಕೊಂಡರು. ಬಳಿಕ ದೇವಸ್ಥಾನದ ಒಳ ಪ್ರವೇಶಿಸಿದ ಪತ್ರಕರ್ತರು ಅರ್ಚಕರು ಹಾಗೂ ಧರ್ಮದರ್ಶಿಯವರಲ್ಲಿ ಲಂಕಾ ಪ್ರಧಾನಿ ಭೇಟಿಯ ಕುರಿತು ಮಾಹಿತಿ ಪಡೆದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ವಿರುದ್ದ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.