ಕೊವೀಡ್-19: ಉಡುಪಿಯಲ್ಲಿ ಮೊದಲ ಬಲಿ; ಮಣಿಪಾಲದಲ್ಲಿ ಮೃತಪಟ್ಟ ವ್ಯಕ್ತಿಗೆ ಪಾಸಿಟಿವ್ ದೃಢ
ಉಡುಪಿ: ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟ 54-ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ .
ಮಹಾರಾಷ್ಟ್ರದಿಂದ ಬಂದ ಕುಂದಾಪುರ ಮೂಲದ 54 ವರ್ಷದ ವ್ಯಕ್ತಿ, 13ನೇ ಮೇ 2020ರ ಸಂಜೆ ಹೃದಯಾಘಾತವಾಗಿ (MI) ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿದ್ದು 14 ಮೇ 2020ರ ಸಂಜೆ ಮೃತಪಟ್ಟಿರುತ್ತಾರೆ. ಅವರಿಗೆ ಕೊರೊನಾ ಸೋಂಕು ಇರುವುದಾಗಿ ಇಂದು ಬಂದ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ.
ಆ ವ್ಯಕ್ತಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ದಿನದಿಂದ ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ಕೊಡಲಾಗಿತ್ತು. ಆತನ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಅದರ ವರದಿ ಕೊರೊನಾ ಪಾಸಿಟಿವ್ ಎಂದು ಇಂದು ದೃಢವಾಗಿದೆ.
ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ ತಂಡದಲ್ಲಿದ್ದ ಕೆಲವೊಂದು ಸಿಬ್ಬಂದಿಗಳನ್ನು ಕ್ವಾರಂಟೈನಿಗೆ ಒಳಪಡಿಸಲಾಗಿದೆ. ಸರಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗಿದ್ದು, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಮತ್ತು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ಹೊರರೋಗಿ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ