ಕೊವೀಡ್19 ಲಾಕ್ ಡೌನ್; ಹಿರಿಯ ನಾಗರಿಕನಿಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು
ಮಂಗಳೂರು: ಲಾಕ್ ಡೌನ್ ಸಂದರ್ಭ ಮಂಗಳೂರಿನ ಲಾಲ್ ಬಾಗ್ ಬಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹಿರಿಯ ನಾಗರಿಕರೋರ್ವರ ಮೇಲೆ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ, ಏಪ್ರಿಲ್ 16, ಸಂಜೆ, ಲಾಕ್ ಡೌನ್ ಸಮಯದಲ್ಲಿ ಹಿರಿಯ ನಾಗರಿಕರೊಬ್ಬರು ತನ್ನ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ಅವರನ್ನು ತಡೆದು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಕೇಳಿದರು. ಆದರೆ ಆ ವ್ಯಕ್ತಿ ಪೊಲೀಸರ ವಿರುದ್ದವೇ ಕೆಟ್ಟ ಭಾಷೆ ಪ್ರಯೋಗಿಸಿದ್ದಲ್ಲದೆ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಪಾಸ್ ತೋರಿಸಲು ಪೊಲೀಸರು ಆ ಹಿರಿಯ ನಾಗರಿಕರನ್ನು ಕೇಳಿದಾಗ, ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವೃದ್ಧರು, “ನಿಮಗೆ ಯಾವ ಪಾಸ್ ಬೇಕು? ನಾನು ಶೆಡಿಗುಡ್ಡಕ್ಕೆ ಹೋಗುತ್ತಿದ್ದೇನೆ, ನನಗೆ ಪಾಸ್ ಇಲ್ಲ. ಇದು ನನ್ನ ಕಾರು, ನೀವು ನನ್ನನ್ನು ಹೋಗಲು ಏಕೆ ಅನುಮತಿಸುತ್ತಿಲ್ಲ ಎಂದು ಉಡಾಫೆಯಾಗಿ ಪ್ರಶ್ನಿಸಿದ್ದಾರೆ? ” ಅಲ್ಲದೆ ಹಿರಿಯ ನಾಗರಿಕರು ತನ್ನ ಕಾರಿನ ಮುಂದೆ ಇರಿಸಿದ್ದ ಬ್ಯಾರಿಕೇಡ್ ಅನ್ನು ಕೂಡ ತೆಗೆದುಹಾಕಲು ಪ್ರಯತ್ನಿಸಿದ್ದಾರೆ.
ಈ ಸಂಬಂಧ ಉರ್ವಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 353, 504 ಮತ್ತು 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವ್ಯಕ್ತಿಯ ವಯಸ್ಸು ಮತ್ತು ಸ್ಥಿತಿಯನ್ನು ಪರಿಗಣಿಸಿ ಪೊಲೀಸರು ಕಾರನ್ನು ವಶಪಡಿಸಿಕೊಂಡಿಲ್ಲ ಅಥವಾ ಹಿರಿಯ ನಾಗರಿಕನನ್ನು ಬಂಧಿಸಿಲ್ಲ.