ಕೋಟೇಶ್ವರ ಗಾಣಿಗ ಯುವ ಸಂಘಟನೆಯಿಂದ ಮಕ್ಕಳಿಗೆ ನೋಟ್ ಬುಕ್, ಕೊಡೆ ವಿತರಣೆ
ಕೋಟ: ಗಾಣಿಗ ಸಮಾಜವು ಶೈಕ್ಷಣಿಕವಾಗಿ ಮುಂದುವರಿಯುವ ಮೂಲಕ ಇನ್ನಷ್ಟು ಬಲಿಷ್ಟಗೊಳ್ಳಬೇಕು. ಮಹಿಳೆಯರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು.ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆ ರಚಿಸಿರುವುದು ಉತ್ತಮ ಕೆಲಸ. ಗಾಣಿಗ ಸಮಾಜ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.
ಅವರು ಬೀಜಾಡಿಯ ಮಿತ್ರಸೌಧ ಸಭಾಂಗಣದಲ್ಲಿ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ ಹಮ್ಮಿಕೊಂಡ ಉಚಿತ ನೋಟ್ ಪುಸ್ತಕ, ಕೊಡೆ ವಿತರಣೆ,ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಹಿಳಾ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಸುಧಾಕರ ಗಾಣಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ ಶುಭಾಶಂಸನೆ ಮಾಡಿದರು. ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಕುಂದಾಪುರ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸತೀಶ್ ಗಾಣಿಗ, ಕಾಳಾವರ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲಾವತಿ, ಸಾಲಿಗ್ರಾಮ ಪಟ್ಟಣ ಪಂಚಾಯತಿ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.ಖ್ಯಾತ ಪತ್ರಕರ್ತ ಜಾನ್ ಡಿಸೋಜಾ ಆಶಯ ಭಾಷಣ ಮಾಡಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಕೊಡೆಯನ್ನು ವಿತರಿಸಲಾಯಿತು.
ಗಾಣಿಗ ಯುವ ಸಂಘಟನೆ ಗೌರವಾಧ್ಯಕ್ಷ ಬಿ.ಜಿ. ನಾಗರಾಜ್, ಕಾರ್ಯದರ್ಶಿ ರಾಮಚಂದ್ರ ಗಾಣಿಗ, ಗಾಣಿಗ ಮಹಿಳಾ ಘಟಕ ಅಧ್ಯಕ್ಷೆ ಸವಿತಾ ಶೇಖರ್ ಗಾಣಿಗ, ಗೌರವಾಧ್ಯಕ್ಷೆ ಪ್ರಭಾವತಿ ಗಾಣಿಗ, ಕಾರ್ಯದರ್ಶಿ ಸುಜಾತಾ ಪ್ರಶಾಂತ ಗಾಣಿಗ, ಗಾಣಿಗ ಸೇವಾ ಸಂಘದ ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ ಉಪಸ್ಥಿತರಿದ್ದರು.ಪ್ರತಿಮಾ ಚಂದ್ರಶೇಖರ್ ಪ್ರಾರ್ಥಿಸಿದರು. ಪ್ರಭಾಕರ ಬಿ.ಕುಂಭಾಸಿ ಸ್ವಾಗತಿಸಿದರು. ಮಂಜುನಾಥ ಕೆ.ಎಸ್. ಪ್ರಸ್ತಾವನೆಗೈದರು. ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ರಾಮಚಂದ್ರ ಗಾಣಿಗ ವಂದಿಸಿದರು.
ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವು
ಆಕೆ ಕೋಟೇಶ್ವರ ದೊಡ್ಡೋಣಿ ನಿವಾಸಿ ಲಕ್ಷ್ಮೀ ಗಾಣಿಗ. ಕೋಟೇಶ್ವರ ಸರಕಾರಿ ಶಾಲೆಯ ವಿದ್ಯಾರ್ಥಿನಿ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ 606 ಅಂಕ ಪಡೆದಿದ್ದು ಪಿಯುಸಿಗೆ ಕಾಲೇಜು ಸೇರಬಯಸಿದ್ದಳು. ಆರ್ಥಿಕ ಸಮಸ್ಯೆಯಿದ್ದ ಕಾರಣ ಚಿನ್ನಾಭರಣ ಅಡವಿಟ್ಟು ಆಕೆ ಪೋಷಕರು ಕಾಲೇಜಿಗೆ ದಾಖಲಾತಿ ಮಾಡಿದ್ದರು. ಈ ವಿಚಾರ ಕೋಟೇಶ್ವರ ಗಾಣಿಗ ಯುವಸಂಘಟನೆಯ ಗಮನಕ್ಕೆ ಬಂದಿದ್ದು ಅವರ ಮೂಲಕವಾಗಿ ದಾನಿಗಳಾದ ನಿರ್ಮಲಾ ಕುಂಭಾಸಿ ಸೇರಿದಂತೆ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಗಣ್ಯರಾದ ರಮೇಶ್ ಗಾಣಿಗ ಕೊಲ್ಲೂರು, ಪ್ರಭಾಕರ ಕುಂಭಾಸಿ, ಜಾನ್ ಡಿಸೋಜಾ, ರಾಮಚಂದ್ರ ಗಾಣಿಗ ಆಕೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾದರಿಯಾದರು.