ಕೋಟ: ಅದೃಷ್ಟ ಬೆನ್ನು ಹತ್ತಿದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎನ್ನುವ ಮಾತು ಕೇಳಿದ್ದೇವೆ, ಆದರೆ ಇಲ್ಲಿ ಆಗಿರುವುದು ದದ್ವಿರುದ್ಧ. ಸಾಲಿಗ್ರಾಮದ ಕಾರ್ಕಡದಲ್ಲಿ ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದ ಮಗ ಶುಕ್ರವಾರದಂದು ಮರದಿಂದ ಬಿದ್ದು ಅಕಾಲೀಕ ಮರಣಕ್ಕೀಡಾದ ಬೆನ್ನಲ್ಲೆ, ಬಂದ ಹಿಂಗಾರು ಮಳೆಯ ಸಿಡಿಲು ಬಡಿದು, ಮೃತನ ಮನೆಗೆ ಹಾನಿ ಮಾಡಿದ ಘಟನೆ ನಡೆದಿದೆ.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಕಡ ಬಡಾಹೋಳಿಯಲ್ಲಿ ಅತ್ಯಂತ ಕಷ್ಟ ಜೀವನ ನಡೆಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ನೀಲು ಎನ್ನುವವರ ಮಗ ಮಾಲಿಂಗ(50) ಮರದಿಂದ ಬಿದ್ದು ಮೃತಪಟ್ಟವ. ಕೂಲಿ ಕೃಷಿಕರಾಗಿ ಕಾಯಿ ತೆಗೆಯುವ ಉದ್ಯೋಗ ಮಾಡುತ್ತಾ ಮನೆಯ ಮುಖ್ಯಾಧಾರವಾಗಿ ಮಾಲಿಂಗ ಶುಕ್ರವಾರ ಕಾವಡಿಯಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಮರದ ಕಾಯಿ ತೆಗೆಯುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಮರದಿಂದ ಬಿದ್ದವರನ್ನು ಊರಿನವರ ಸಹಾಯದಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಿದಾಗ ಮಾಲಿಂಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರವಾಗಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ ಮನೆಯವರು, ಮಾಲಿಂಗ ಅವರ ಶವವನ್ನು ಶನಿವಾರ ಪಡೆಯುವ ಸುದ್ದಿ ಹಿಡಿದು ಮನೆಗೆ ಬಂದಿದ್ದಾರೆ.
ಸಂಜೆ 5ರ ಹೊತ್ತಿಗೆ ಸಣ್ಣದಾಗಿ ಆರಂಭವಾದ ಹಿಂಗಾರು ಮಳೆ ಹಿನ್ನಲೆಯಲ್ಲಿ ಜೋರಾದ ಗುಡುಗು ಸಿಡಿಲು ಬರುತ್ತಿದ್ದ ಕಾರಣ ಮನೆಯ ಒಳಗೆ ಮನೆಯವರೆಲ್ಲಾ ಮೃತಪಟ್ಟ ಮಾಲಿಂಗ ವಿಚಾರವಾಗಿ ರೋಧಿಸುತ್ತಿರುವಾಗಲೇ ಮನೆಯ ಮುಂಭಾಗದ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ರಭಸಕ್ಕೆ ಮನೆಯ ವಯರಿಂಗ್ ಸಂಪೂರ್ಣ ಸುಟ್ಟಿ ಹೋಗಿದೆ, ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕ್ಕೊಂಡು ಉರಿದಿದೆ. ಅಲ್ಲದೇ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಮನೆಗೂ ತಗುಲಿ ಒಟ್ಟು 4 ಮನೆಯ ವಯರಿಂಗ್ ಸಂಪೂರ್ಣ ಕರಕಲಾಗಿದೆ.
ಒಟ್ಟು ನಾಲ್ಕು ಮನೆಯ ವಯರಿಂಗ್ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಹೊಸದಾಗಿ ಖರೀದಿಸಿದ ಮೊಬೈಲ್ ಛಿದ್ರವಾಗಿದೆ. ಸುಮಾರು ಒಂದು ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟವಾಗಿರುವುದು ಅಲ್ಲದೇ ಒಂದೆ ಎರಡು ಬರ ಸಿಡಿಲು ಬಡಿದು ಮಾಲಿಂಗ ಅವರ ಕುಟುಂಬಕ್ಕೆ ದಾರಿ ಕಾಣದಂತಾಗಿದೆ. ಘಟನಾಸ್ಥಳಕ್ಕೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಅಚ್ಯುತ ಪೂಜಾರಿ ಕಾರ್ಕಡ ಭೇಟಿ ನೀಡಿ ಸಾಂತ್ವಾನ ಹೇಳಿದ್ದು, ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.