Home Mangalorean News Kannada News ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಂಧನಕ್ಕೆ ಮೃತ ಕುಟುಂಬಿಕರ ಆಗ್ರಹ

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಂಧನಕ್ಕೆ ಮೃತ ಕುಟುಂಬಿಕರ ಆಗ್ರಹ

Spread the love

ಕೋಟ ಜೋಡಿ ಕೊಲೆ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಂಧನಕ್ಕೆ ಮೃತ ಕುಟುಂಬಿಕರ ಆಗ್ರಹ

ಉಡುಪಿ: ಕೋಟ ಜೋಡಿ ಕೊಲೆ ಭರತ್ ಮತ್ತು ಆತನ ಸ್ನೇಹಿತ ಯತೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಜಾಮೀನು ಸರ್ವೋಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿದ್ದು ಪೊಲೀಸರು ಆತನನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ತಾಳುತ್ತಿದ್ದು ಮೂರು ದಿನಗಳಲ್ಲಿ ಬಂಧಿಸದೇ ಹೋದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಮೃತ ಭರತ್ ತಮ್ಮ ಹೇಮಂತ್ ಹೇಳಿದರು.

ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2019ರ ಜನವರಿ 26ರಂದು ರಾತ್ರಿ ಸುಮಾರು 10 ಗಂಟೆಗೆ ಭರತ್ ಮತ್ತು ಆತನ ಸ್ನೇಹಿತ ಯತೀಶ್ ನನ್ನು ಕೋಟ ಠಾಣಾ ವ್ಯಾಪ್ತಿಯ ಮಣೂರು ಎಂಬಲ್ಲಿ ಕೊಲೆ ಮಾಡಲಾಗಿತ್ತು. ಅಂದಿನ ಪೊಲೀಸ್ ವರಿಷ್ಠಾಧಿಕಾರಿಯವರಾದ ಲಕ್ಷ್ಮಣ್ ನಿಂಬರ್ಗಿಯವರು ಇದರಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಇದರಲ್ಲಿ ಕೆಲವು ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿರುತ್ತಾರೆ. ಅವರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾದ ರಾಘವೇಂದ್ರ ಕಾಂಚನ್ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದು, ಈ ಬಗ್ಗೆ ಭರತ್ ತಾಯಿ ಪಾರ್ವತಿ ಸರ್ವೋಚ್ಛ ನ್ಯಾಯಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಾಲಯವು ಪಾರ್ವತಿಯವರ ಮನವಿಯನ್ನು ಪುರಸ್ಕರಿಸಿ ಆರೋಪಿ ರಾಘವೇಂದ್ರನ ಜಾಮೀನನ್ನು ವಜಾ ಮಾಡಿ ತಕ್ಷಣವೇ ಬಂಧಿಸಲು ಸೂಚಿರುತ್ತದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಎಲ್ಲಾ ದಾಖಲಾತಿಯನ್ನು ಸಲ್ಲಿಸಿದ್ದರೂ ಈ ವರೆಗೂ ಆರೋಪಿಯನ್ನು ಬಂಧಿಸಿರುವುದಿಲ್ಲ. ಆರೋಪಿಯ ಪರವಾಗಿ ಕುಂದಾಪುರದ ಸ್ಥಳೀಯ ಒಬ್ಬ ರಾಜಕಾರಣಿಯು ಪೊಲೀಸ್ ಇಲಾಖೆಗೆ ಒತ್ತಡ ತಂದಿರುವ ಬಗ್ಗೆ ಗುಮಾನಿ ಇದ್ದು, ಇನ್ನು 3 ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದಲ್ಲಿ ಫೆಬ್ರವರಿ 7ರಂದು ಭರತನ ತಾಯಿ ಪಾರ್ವತಿಯವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.

ಒಂದು ವೇಳೆ ಆರೋಪಿಯನ್ನು ಬಂಧಿಸದಿದ್ದಲ್ಲಿ ಪೊಲೀಸ್ ಇಲಾಖೆಯ ಮೇಲೆ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲು ಮಾಡಲು ತೀರ್ಮಾನಿಸಿದ್ದು, ತನ್ನ ಮಗ ಭರತ ಹಾಗೂ ಆತನ ಸ್ನೇಹಿತ ಯತೀಶ್ ನ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭರತ್ ತಾಯಿ ಪಾರ್ವತಿ, ಯತೀಶ್ ಅಣ್ಣ ಮನೋಜ್, ಕುಟುಂಬಿಕರಾದ ಅಣ್ಣಪ್ಪ, ಮಾಲಿನಿ ಉಪಸ್ಥಿತರಿದ್ದರು.


Spread the love

Exit mobile version