ಕೋಟ: ಪೊಲೀಸ್ ಸಿಬಂದಿಗಳು ನಿಜವಾದ ಕೊರೋನಾ ವಾರಿಯರ್ಸ್ ; ಗೃಹ ಸಚಿವ ಬೊಮ್ಮಾಯಿ
ಕೋಟ: ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸಿಬಂದಿಗಳು ನಿಜವಾದ ಕೊರೋನಾ ವಾರಿಯರ್ಸ್ ಆಗಿ ಸೇವೆ ನೀಡುತ್ತಿದ್ದಾರೆ. ಜನರ ಮಧ್ಯೆ ಕೊರೋನಾ ಅಪಾಯವನ್ನ ಮೆಟ್ಟಿ ನಿಂತೇ ಕೆಲಸ ಮಾಡುವ ಪೊಲೀಸರ ಕಾರ್ಯನಿಷ್ಠೆ ಶ್ಲಾಘನೀಯ. ಎಂದು ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಮಂಗಳವಾರ ಕೋಟದಲ್ಲಿ ನಿರ್ಮಿಸಲಾದ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಗೃಹ ಇಲಾಖೆ ನೆರೆ, ಕೋವಿಡ್ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿಕೊಂಡು ಬಂದಿದೆ. ನಮ್ಮ ಪೊಲೀಸ್ ಇಲಾಖೆಯ ಸಿಬಂದಿಗಳು ನಿಜವಾದ ಕೊರೋನಾ ವಾರಿಯರ್ಸ್ ಎಂದರೆ ತಪ್ಪಾಗಲಾರದು. ಪೊಲೀಸ್ ಇಲಾಖೆಯಲ್ಲಿ ಈ ವರ್ಷ ಹೊಸತನ್ನು ಪರಿಚಯ ಮಾಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ, ವಸತಿ ವ್ಯವಸ್ಥೆ, ಪೊಲೀಸರಿಗೆ ಆರೋಗ್ಯ ಭಾಗ್ಯ ಅದರ ಜೊತೆ ಹೊಸ ಪರಿಕರಗಳನ್ನು ಇಲಾಖೆಗೆ ಒದಗಿಸಲಾಗಿದೆ. ಅಗ್ನಿಶಾಮಕ ಇಲಾಖೆಯಲ್ಲಿ ಕೂಡ ಹೊಸತನವನ್ನು ತರಲಾಗುತ್ತಿದೆ. ಜೈಲುಗಳಲ್ಲಿ ಸಹ ಸುಧಾರಣೆಗಳನ್ನು ತರಲಾಗಿದೆ.
ಈ ವೇಳೆ ಮೀನುಗಾರಿಕೆ ಹಾಗೂ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷರಾದ ದಿನಕರ ಬಾಬು ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ ಜಗದೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎನ್ ವಿಷ್ಣುವರ್ಧನ್, ಡಿವೈಎಸ್ಪಿ ಜೈ ಶಂಕರ್, ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್, ಉಡುಪಿ ಠಾಣಾಧಿಕಾರಿಗಳಾದ ಸಕ್ತೀವೇಲು, ಸದಾಶಿವ ಗೌರೋಜಿ, ಬ್ರಹ್ಮಾವರ ಠಾಣಾಧಿಕಾರಿ ರಾಘವೇಂದ್ರ, ಕುಂದಾಪುರ ಟ್ರಾಫಿಕ್ ಎಸ್ ಐ ಪುಷ್ಪಾ ಹಾಗೂ ಇತರರು ಉಪಸ್ಥಿತರಿದ್ದರು.