ಕೋಟ: ಕೋಟ-ಸಾಯ್ಬರ್‍ಕಟ್ಟೆ ರಸ್ತೆಯ ನಡುವಿನಲ್ಲಿ ಬರುವ ಮಧುವನ ಸಮೀಪದ ರೈಲ್ವೆ ಮೇಲ್ ಸೇತುವೆ ಹೊಂಡಗಳಿಂದ ಕೂಡಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ದುರಸ್ಥಿಪಡಿಸುವಂತೆ ಆಗ್ರಹಿಸಿ ಸಾರ್ವಜನಿಕರು ಬುಧವಾರದಂದು ರಸ್ತೆಯಲ್ಲಿನ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಕೋಟ ಮೂರು ಕೈ ರಾಷ್ಟ್ರೀಯ ಹೆದ್ದಾರಿ 66ರಿಂದ ಸಾಯ್ಬರ್‍ಕಟ್ಟೆ ಮೂಲಕ ಗೋಳಿಯಂಗಡಿ,ಬಿದ್ಕಲ್‍ಕಟ್ಟೆ ಮತ್ತು ಬಾರ್ಕೂರುಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ದಿನ ನಿತ್ಯ ಸಾಕಷ್ಟು ವಾಹನಗಳು ತಿರುಗಾಡುತ್ತವೆ. ಇದೇ ಹಾದಿಯಲ್ಲಿ ಬರುವ ಮಧುವನ ಎನ್ನುವಲ್ಲಿ ರಾಜ್ಯ ಹೆದ್ದಾರಿ ಅಡಿಯಲ್ಲಿ ಕೊಂಕಣ ರೈಲ್ವೆ ಹಳಿ ಹಾದು ಹೋಗಿದ್ದು, ರಸ್ತೆಯ ಸಂಚಾರಕ್ಕಾಗಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯಲ್ಲಿ ನಿರಂತರ ವಾಹನ ಸಂಚಾರದ ಪರಿಣಾಮವಾಗಿ, ಸೇತುವೆಯ ಮೇಲ್ಭಾಗದ ಕಾಂಕ್ರೀಟ್ ಕಿತ್ತು ಹೋಗಿ ಹೊಂಡವಾಗಿರುವುದಲ್ಲದೆ, ಕಾಂಕ್ರೀಟ್‍ಗೆ ಹಾಕಲಾಗಿದ್ದ ಕಬ್ಬಿಣದ ಕಂಬಿಗಳು ಕಿತ್ತು ವಾಹನ ಸಂಚಾರಕ್ಕೆ ಸಮಸ್ಯೆಯುಂಟಾಗುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ಸೇತುವೆ ಹೊಂಡ ಬೀಳುತ್ತಿದ್ದು ಈ ಕುರಿತು ಹಲವು ಬಾರಿ ಸಾರ್ವಜನಿಕರು ಸೇತುವೆ ದುರಸ್ಥಿಗೆ ಆಗ್ರಹಿಸಿದ್ದರು ಕೂಡ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ಸಂದರ್ಭ ರಸ್ತೆ ತಡೆ ನಡೆಸಿ, ಸೇತುವೆಯ ಹೊಂಡದಲ್ಲಿ ಬಾಳೆಗಿಡ ನೆಟ್ಟು ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗಿನಿಂದ ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟ ಅಧಿಕಾರಿಗಳಾರು ಘಟನಾಸ್ಥಳಕ್ಕೆ ಬಂದು ಗಮನಿಸದ ಹಿನ್ನೆಲೆಯಲ್ಲಿ, ಸ್ಥಳೀಯ ದಾನಿಗಳ ನೆರವಿನಿಂದಲೇ ಮರಳು, ಜಲ್ಲಿ ಮತ್ತು ಸಿಮೆಂಟ್ ತಂದು, ಸ್ಥಳೀಯರೆ ಹೊಂಡ ತುಂಬಿದ ರಸ್ತೆಗೆ ಕಾಂಕ್ರೀಟಿಕರಣ ನಡೆಸಿದರು. ಪ್ರತಿಭಟನೆಯಲ್ಲಿ ಸ್ಥಳೀಯ ವಡ್ಡರ್ಸೆ ರಥಬೀದಿ ಫ್ರೆಂಡ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು, ಮಧುವನ ಹಾಗೂ ವಡ್ಡರ್ಸೆಯ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.