ಕೋಟ: ಗ್ರಾಮ ಪಂಚಾಯಿತಿ ಎನ್ನುವುದು ಅತ್ಯಂತ ಕೆಳಸ್ತರದಲ್ಲಿರುವ ಆಡಳಿತ ವ್ಯವಸ್ಥೆ. ಪಂಚಾಯಿತಿಗೆ ಸರಕಾರ ನೀಡುವ ಅನುದಾನವು ತುಂಬಾ ಕಡಿಮೆ, ಗ್ರಾಮ ಸಭೆಯಲ್ಲಿ ಕಂಡು ಬಂದ ಬೇಡಿಕೆಗಳನ್ನು ಪೂರೈಸಲು ಶಾಸಕರ, ಸಚಿವ ಅನುದಾನವನ್ನೆ ಬಯಸಬೇಕಾದ ಪರಿಸ್ಥಿತಿ ಗ್ರಾಮ ಪಂಚಾಯಿತಿಗಿದೆ. ಇಂತಹ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳಿಗೆ ಶೀಘ್ರ ವಿಲೀವಾರಿ ಮಾಡುವುದು ಗ್ರಾಮ ಪಂಚಾಯಿತಿ ಭೇಟಿಯ ಮುಖ್ಯ ಉದ್ದೇಶ ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಪಾಂಡೇಶ್ವರ ಗ್ರಾಮ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಉಡುಪಿ ಮತ್ತು ತಾಲೂಕು ಪಂಚಾಯಿತಿ ಸಹಭಾಗಿತ್ವದಲ್ಲಿ ಪಂಚಾಯಿತಿ ಭೇಟಿ ಮತ್ತು ವಿವಿಧ ಸವಲತ್ತುಗಳ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ರಾಜ್ಯ ಸರಕಾರ ದುಡಿದು ತಿನ್ನುವವರಿಗೆ ಪೂರಕವಾದ ಅನೇಕ ಯೊಜನೆಗಳನ್ನು ರೂಪಸಿದೆ. ಅನೇಕ ವರ್ಷಗಳಿಂದ ಸರಕಾರದಲ್ಲಿ ಕುಳಿತಿರುವ ಬಡವರಿಗೆ ಹಕ್ಕು ಪತ್ರ ಒದಗಿಸುವ 94ಸಿ ಕಾನೂನು ತಿದ್ದುಪಡಿ ಮಾಡಲಾಗಿದೆ. ವಾರದಲ್ಲಿ 3 ದಿನಗಳ ಕಾಲ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ನೀಡಲಾಗುತ್ತಿತ್ತು ಅದನ್ನು ಇನ್ನು ಮುಂದೆ 5 ದಿನಗಳವರೆಗೆ ವಿಸ್ತರಿಸುವುದು, ಪ್ರತಿ ಶಾಲಾ ವಿದ್ಯಾರ್ಥಿಗಳಿಗೂ 2 ಜೊತೆ ಶೂ ನೀಡುವ ಯೋಜನೆ ರೂಪಸಿದೆ. ಹಿಂದೆ ಹುಡ್ಕೋ, ಆಶ್ರಯ, ಜನತಾ ಮನೆ ಯೋಜನೆಯ ಫಲಾನುಭವಿಗಳಿಗೆ ಸರಕಾರ 1,600 ಕೋಟಿ ಸಾಲಮನ್ನ, ಬಡವರ ವಿದ್ಯುತ್ ಯೋಜನೆಯ 1200ಕೋಟಿ ಬಾಕಿ ಬಿಲ್ ಪಾವತಿ ಸರಕಾರ ಮಾಡಿದೆ. 9/11 ಸಮಸ್ಯೆಯಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ರಿಯಾಯಿತಿ ನೀಡಲಾಗಿದೆ. ಇಲ್ಲಿನ ಕರಾವಳಿ ಪ್ರದೇಶಕ್ಕೆ ಕೇರಳ ಗೋವಾ ಮಾದರಿಯಲ್ಲಿ 200 ಮೀಟರ್ ನಿಂದ 50 ಮೀಟರ್‍ಗೆ ರಿಯಾಯಿತಿ ನೀಡಲಾಗಿದೆ. ಕೋಟದಲ್ಲಿ ಆಧಾರ್ ಸಮಸ್ಯೆ ಪರಿಹಾರಕ್ಕಾಗಿ ಆಧಾರ್ ಕೇಂದ್ರ ನಿರ್ಮಾಣ ಈಗಾಗಲೇ ಪ್ರಗತಿಯಲ್ಲಿದೆ. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕಸ ವಿಲೇವಾರಿ ಘಟಕ ಮುಂದಿನ ದಿನಗಳಲ್ಲಿ ಸ್ಥಾಪಿಸುವ ಗುರಿ ಇದೆ ಇದರಿಂದ ಸ್ಥಳೀಯ ಕೆಲವು ಪಂಚಾಯಿತಿಗಳ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಸವರಾಜ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಕುಂದರ್, ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಗಂಗಾಧರ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ರೋಶನಿ ಒಲಿವರ, ತಹಶೀಲ್ದಾರ್ ತಿಪ್ಪೆಸ್ವಾಮಿ, ಮಾಜಿ ಪಂಚಾಯಿತಿ ಅಧ್ಯಕ್ಷ ವಿಠಲ್ ಪೂಜಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಸಚಿವರು ವಿವಿಧ ಇಲಾಖೆಯಿಂದ ಸಿಗುವ ಸಂಧ್ಯಾ ಸುರಕ್ಷೆ, ವಿಧವಾ ವೇತನ, ಸಾಲಮನ್ನ ಪತ್ರ, ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೇಮ್ಸ್ ಡಿ ಸಿಲ್ವಾ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಬಳಿಕ ಕೋಡಿ, ಕೋಟ, ಕೋಟತಟ್ಟು ಮತ್ತು ಬಾರ್ಕೂರು ಪಂಚಾಯಿತಿಗಳಿಗೆ ಸಚಿವರು ಭೇಟಿ ನೀಡಿದರು.