ಕೋಡಿ ಸಮುದ್ರದಲ್ಲಿ ದುರ್ಘಟನೆ: ಸಮುದ್ರಕ್ಕಿಳಿದ ಇಬ್ಬರು ಸಹೋದರರ ಸಾವು, ಓರ್ವನ ರಕ್ಷಣೆ

Spread the love

ಕೋಡಿ ಸಮುದ್ರದಲ್ಲಿ ದುರ್ಘಟನೆ: ಸಮುದ್ರಕ್ಕಿಳಿದ ಇಬ್ಬರು ಸಹೋದರರ ಸಾವು, ಓರ್ವನ ರಕ್ಷಣೆ

ಕುಂದಾಪುರ: ಕಡಲ‌ ಕಿನಾರೆಯಲ್ಲಿ ಸಮಯ ಕಳೆಯಲು ಬಂದ ಮೂವರು ಸಹೋದರರ ಪೈಕಿ ಈರ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಕೋಡಿ‌ ಸಮುದ್ರತೀರದಲ್ಲಿ ನಡೆದಿದೆ.


ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎನ್ನುವವರ ಮಕ್ಕಳಾದ ಧನರಾಜ್ (23)ಹಾಗೂ ದರ್ಶನ್ (18) ಸಾವನ್ನಪ್ಪಿದವರು. ಇನ್ನೋರ್ವ ಧನುಷ್ (20) ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮೂವರು ಸಹೋದರರು ಕಡಲ ಕಿನಾರೆಯಲ್ಲಿ ಸ್ನಾನಕ್ಕೆಂದು ಅರಬ್ಬಿ ಕಡಲಿಗೆ ಇಳಿದಾಗ ಆಕಸ್ಮಿಕವಾಗಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದಾರೆ. ದುರಂತದ ಮಾಹಿತಿ ಪಡೆದು ಸ್ಥಳೀಯರು ಕೂಡಲೇ ರಕ್ಷಣೆಗೆ ಪ್ರಯತ್ನಿಸಿದರೂ, ಮೂವರ ಪೈಕಿ ಧನುಷ್ ಅವರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಸಾವನ್ನಪ್ಪಿರುವ ಇಬ್ಬರು ಸಹೋದರರ ಶವವನ್ನು ಮೇಲಕ್ಕೆ ಎತ್ತಲಾಗಿದೆ. ರಕ್ಷಣೆ ಮಾಡಲಾಗಿರುವ ಧನುಷ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಧನರಾಜ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ವರ್ಕ್ ಫ್ರಮ್ ಹೋಮ್‌ ಅಡಿಯಲ್ಲಿ ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದರು. ಧನುಷ್ ಸುರತ್ಕಲ್ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದು, ದರ್ಶನ ಕುಂದಾಪುರದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದರು.ಎಂದು ತಿಳಿದುಬಂದಿದೆ.

ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ , ಎಸ್ ಐ ಗಳಾದ ನಂಜಾ ನಾಯ್ಕ್ ಹಾಗೂ ಪುಷ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Spread the love