ಕೋಣ ಸಾಗಣೆ ಮಾಡುತ್ತಿದ್ದ ವ್ಯಾಪಾರಿಗೆ ಥಳಿತದ ಆರೋಪ ದೂರು-ಪ್ರತಿ ದೂರು ದಾಖಲು
ಮಂಗಳೂರು: ಜೋಕಟ್ಟೆಯಿಂದ ಕುದ್ರೋಳಿಯ ಕಸಾಯಿ ಖಾನೆಗೆ ಕೋಣ ಸಾಗಣೆ ಮಾಡುತ್ತಿದ್ದ ವ್ಯಾಪಾರಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೋಕಟ್ಟೆ ನಿವಾಸಿ ಅಬ್ದುಲ್ ರಹ್ಮಾನ್ ಭಾನುವಾರ ಬೆಳಿಗ್ಗೆ ತನ್ನ ಮನೆಯಲ್ಲಿದ್ದ ನಾಲ್ಕು ಕೋಣಗಳನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದೆ. ಈ ನಡುವೆ ಸಂಘಟನೆಯ ಕಾರ್ಯಕರ್ತರು ನಗರದ ಉರ್ವದ ಇನ್ಫೋಸಿಸ್ ಕಚೇರಿಯ ಸಮೀಪ ವಾಹನವನ್ನು ತಡೆದು ನಿಲ್ಲಿಸಿದ್ದು ವಾಹನದಿಂದ ರಹ್ಮಾನ್ ಅವರನ್ನು ಕೆಳಗೆ ಇಳಿಸಿ ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ವ್ಯಾಪಾರಿ ಹಾಗೂ ಕೋಣಗಳನ್ನು ವಶಪಡಿಸಿಕೊಂಡಿದ್ದು ಬಳಿಕ ರಹ್ಮಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ನ್ಯಾಯಾಧೀಶರ ಎದರು ಹಾಜರುಪಡಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.
ಪೊಲೀಸರು ವಶಕ್ಕೆ ಪಡೆಯಲಾದ ಕೋಣಗಳು ಸೇರಿದಂತೆ ಒಟ್ಟು 10 ಜಾನುವಾರುಗಳನ್ನು ರಹ್ಮಾನ್ ಅವರು ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷಿ ಮಾರುಕಟ್ಟೆಯಿಂದ ಖರೀದಿ ಮಾಡಿದ್ದರು. ಹತ್ತು ಜಾನುವಾರುಗಳಲ್ಲಿ ಈಗಾಗಲೇ ಆರನ್ನು ಮಾರಾಟ ಮಾಡಿದ್ದು ಉಳಿದ ನಾಲ್ಕು ಕೋಣಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಭಾನುವಾರ ಜೋಕಟ್ಟೆಯಿಂದ ಕುದ್ರೋಳಿಗೆ ಸಾಗಣೆ ಮಾಡುವಾಗ ಈ ಘಟನೆ ನಡೆದಿದೆ