Home Mangalorean News Kannada News ಕೋಮುವಾದಿ ಭ್ರಷ್ಠ ಬಿಜೆಪಿಯನ್ನು ಸೋಲಿಸಲು ಜತೆಯಾಗಿ – ಸುನೀಲ್ ಕುಮಾರ್ ಬಜಾಲ್

ಕೋಮುವಾದಿ ಭ್ರಷ್ಠ ಬಿಜೆಪಿಯನ್ನು ಸೋಲಿಸಲು ಜತೆಯಾಗಿ – ಸುನೀಲ್ ಕುಮಾರ್ ಬಜಾಲ್

Spread the love

ಕೋಮುವಾದಿ ಭ್ರಷ್ಠ ಬಿಜೆಪಿಯನ್ನು ಸೋಲಿಸಲು ಜತೆಯಾಗಿ – ಸುನೀಲ್ ಕುಮಾರ್ ಬಜಾಲ್

ಮಂಗಳೂರು:  ಫ್ಯಾಸಿಸ್ಟ್ ಸರ್ವಾಧಿಕಾರಿಯತ್ತ ಹೊರಳುತ್ತಿರುವ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ  ಎಪ್ರಿಲ್ 15 ರಂದು ಸೋಮವಾರ ಬೆಳಿಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯುವ ಬ್ರಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಸಾಮಾಜಿಕ ಕಾರ್ಯಕರ್ತ ಸುನೀಲ್ ಕುಮಾರ್ ಬಜಾಲ್ ಮನವಿ ಮಾಡಿದ್ದಾರೆ

 ಕಳೆದ 33 ವರ್ಷಗಳಿಂದ ಸತತವಾಗಿ ಗೆದ್ದು ಬಂದಿರುವ ಬಿಜೆಪಿ ಈ ಜಿಲ್ಲೆಯ ಸೌಹಾರ್ದತೆಯನ್ನು ನಾಶ ಮಾಡಿದೆ ಹಾಗೂ ಅಭಿವೃದ್ಧಿಗೆ ತೊಡಕಾಗಿದೆ.ಈ ಜಿಲ್ಲೆಯ ಪ್ರಥಮ ಸಂಸದರಾದ ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಜನತೆ ಯಾವತ್ತೂ ಮರೆಯುವ ಹಾಗಿಲ್ಲ.ಅಂತಹ ಒಂದು ಅಭಿವೃದ್ಧಿಗೆ ಮುನ್ನುಡಿಯನ್ನು ಬರೆದಿದ್ದಾರೆ.ಇಂದು ನಮ್ಮ ಕಣ್ಣೆದೆರು ಇರುವ NITK ಸುರತ್ಕಲ್,NMPT,MCF, ಅಂತರಾಷ್ಟ್ರೀಯ ವಿಮಾನ ನಿಲ್ದಾಣ,2 ರಾಷ್ಟ್ರೀಯ ಹೆದ್ದಾರಿಗಳು, ಪುರಭವನ ಇತ್ಯಾದಿಗಳು ಮಲ್ಯರ ದೂರದ್ರಷ್ಠಿಕೊನದ ಕೊಡುಗೆಗಳಾಗಿವೆ.ಆ ನಂತರ ಬಂದಿರುವ ಕೊಂಕಣ ರೈಲ್ವೇ, MRPL ಜಿಲ್ಲೆಗೆ ಮತ್ತಷ್ಟು ಶಕ್ತಿ ತುಂಬಿದೆ.ಇದೇ ಸಂದರ್ಭದಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಜನ್ಮ ತಾಳಿದ ಹಲವು ಬ್ಯಾಂಕುಗಳು ಅದೆಷ್ಟೋ ಉದ್ಯೋಗಗಳನ್ನು ಸ್ರಷ್ಠಿಸಿ ಲಕ್ಷಾಂತರ ಜನತೆಯ ಬದುಕನ್ನು ಬೆಳಗಿಸಿದೆ. ಇವೆಲ್ಲವನ್ನು ನೋಡಿದರೆ 90ರ ದಶಕದವರೆಗೆ ಅಭಿವೃದ್ಧಿಯ ಪರ್ವ ಎಂದರೆ ತಪ್ಪಾಗಲಿಕ್ಕಿಲ್ಲ.

 ಆದರೆ 91ರ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿಗೆ ಮುಹೂರ್ತ ಇಟ್ಟಿತು.ಕಳೆದ 33 ವರ್ಷಗಳಲ್ಲಿ ಧನಂಜಯ ಕುಮಾರ್, ಸದಾನಂದ ಗೌಡ, ನಳೀನ್ ಕುಮಾರ್ ಕಟೀಲುರವರು ನಿರಂತರವಾಗಿ ಗೆಲ್ಲುವ ಮೂಲಕ ಬಿಜೆಪಿ ಸಂಘಪರಿವಾರ ಜಿಲ್ಲೆಯನ್ನು ತನ್ನ ನಿಯಂತ್ರಣಕ್ಕೆ ವಶಪಡಿಸಿಕೊಂಡಿತು. ತಾನು ಆಡಿದ್ದೇ ಆಟ ಎಂಬಂತೆ ತನ್ನ ಮತೀಯ ರಾಜಕಾರಣಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳವ ಮೂಲಕ ಕರಾವಳಿ ಜಿಲ್ಲೆಯನ್ನು ತನ್ನ ಪ್ರಯೋಗ ಶಾಲೆಯನ್ನಾಗಿಸಿತು. ಅನ್ಯಮತೀಯ ಯುವಕನ ಮೇಲೆ ದಾರಿಯಲ್ಲಿ ಬಸ್ಸಿನಲ್ಲಿ ಪಾರ್ಕಿನಲ್ಲಿ ಬೀಚಿನಲ್ಲಿ ಹಲ್ಲೆ, ಗೋಹತ್ಯೆ,ಅಕ್ರಮ ಗೋಸಾಗಾಟ,ಲವ್ ಜಿಹಾದ್, ಮತಾಂತರ ಇತ್ಯಾದಿ ದಿನನಿತ್ಯದ ಸುದ್ದಿಗಳಾದವು.ಜಾತಿ ಧರ್ಮ ದೇವರುಗಳನ್ನು ಬೀದಿಯಲ್ಲಿ ತಂದು ಹರಾಜು ಹಾಕಲಾಯಿತು.ಚರ್ಚ್ ಧಾಳಿ, ಪಬ್ ಧಾಳಿ, ಹೋಂ ಸ್ಟೇ ಧಾಳಿ ಮುಂತಾದ ಪ್ರಕರಣಗಳು ಜಗತ್ತಿನಾದ್ಯಂತ ಕುಖ್ಯಾತಿಗೊಳಗಾಯಿತು. ಸೌಹಾರ್ದತೆಯ ನಾಡೆಂದು ಪ್ರಖ್ಯಾತಿ ಪಡೆದ ಕರಾವಳಿ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿತು.ಹಿಂದುತ್ವ, ಧರ್ಮ ರಕ್ಷಣೆಯ ಅಮಲನ್ನು ಅಮಾಯಕ ಹಿಂದುಳಿದ ವರ್ಗದ ಯುವಕರ ತಲೆಗೇರಿಸಿ, ಅಲ್ಪಸಂಖ್ಯಾತರ ವಿರುದ್ದ ಮತೀಯ ದ್ವೇಷವನ್ನು ಹಬ್ಬಿಸಿ ಅದೆಷ್ಟೋ ಕೋಮು ಗಲಭೆಗಳನ್ನು ನಡೆಸಿ ಅಮಾಯಕರನ್ನು ಕೊಲೆಗೈಯ್ಯಲಾಯಿತು. ಒಂದು ಕಡೆ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆದರೆ, ಮತ್ತೊಂದು ಕಡೆಯಲ್ಲಿ ಕೊಲೆ ಮಾಡಿ ಜೈಲು ಸೇರಿದ ಮಗನ ಕುಟುಂಬವೂ ಕೂಡ ಕಣ್ಣೀರು ಹರಿಸಿತು.ಆದರೆ ಬಿಜೆಪಿ ಸಂಘಪರಿವಾರದ ಮುಖಂಡರು ಮಾತ್ರ ಕರಾವಳಿ ಜಿಲ್ಲೆ ಹಿಂದುತ್ವದ ಭದ್ರಕೋಟೆಯೆಂದು ದುರಂಹಕಾರದಿಂದ ಬೀಗುತ್ತಾ, ಕೋಟ್ಯಾಂತರ ಹಣವನ್ನು ಬಾಚುತ್ತಾ,ತನ್ನ ಅಧಿಕಾರದ ಮದದಿಂದ ಜಿಲ್ಲೆಯ ಜನತೆಯ ಬದುಕನ್ನು ಸರ್ವನಾಶ ಮಾಡುವ ಮೂಲಕ ಸೌಹಾರ್ದತೆಯನ್ನು  ಹಾಳುಗೆಡಹಿದ್ದಾರೆ.

 ಇಂದು ನಾವೆಲ್ಲರೂ ಅವರಲ್ಲಿ ಕೇಳಬೇಕಾದದ್ದು ಇಷ್ಟೇ,ಶೈಕ್ಷಣಿಕ ಕೇಂದ್ರವಾದ ಈ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾಕೆ ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಇಂಜಿನಿಯರಿಂಗ್ ಕಾಲೇಜ್ ಮಾಡಲು ಸಾಧ್ಯವಾಗಿಲ್ಲ….?ವರ್ಷದಲ್ಲಿ ಸುಮಾರು 40,000 ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಪಡೆದು ಹೊರಬರುತ್ತಿದ್ದು, ಅವರಿಗಾಗಿ ನೀವು ಎಷ್ಟು ಉದ್ಯೋಗ ಸ್ರಷ್ಠಿಸಲು ಪ್ರಯತ್ನ ಪಟ್ಟಿದ್ದೀರಿ, ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆಗೆ ನೀವೇನು ಮಾಡಿದ್ದೀರಿ….?ಮಂಗಳೂರಿನಂತಹ ಪುಟ್ಟ ನಗರದಲ್ಲಿ ಅಸಂಖ್ಯಾತ ಖಾಸಗೀ ಆಸ್ಪತ್ರೆಗಳಿದ್ದರೂ ಸಾಮಾನ್ಯ ಜನತೆಯ ಆರೋಗ್ಯ ರಕ್ಷಣೆಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ತಮ್ಮಲ್ಲಿ ಯಾಕಾಗಿಲ್ಲ…..?ಲಕ್ಷಗಟ್ಟಲೆ ಹಣವನ್ನು ಬಡಪಾಯಿ ರೋಗಿಗಳಿಂದ ಹಗಲು ದರೋಡೆ ನಡೆಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಯಾಕೆ ಹಾಕಿಲ್ಲ….?ಆಸ್ತಿ ತೆರಿಗೆ ಹೆಚ್ಚಳ,ವಿಪರೀತವಾಗಿ ತ್ಯಾಜ್ಯ ಶುಲ್ಕ,ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟ್ಯಾಂತರ ಹಣ ಗುಳುಂ ನಡೆಸಿದ್ದು,TDR ಹೆಸರಿನಲ್ಲಿ ಅತ್ಯಂತ ಮೋಸದಾಟ ಇವೆಲ್ಲವನ್ನೂ ಬಿಜೆಪಿಯವರಲ್ಲಿ ಕೇಳಬೇಕಾಗಿದೆ.

 ನಾವಿಂದು ಮಾತನಾಡಬೇಕಾಗಿರುವುದು ಅಭಿವೃದ್ಧಿಯ ವಿಷಯ.ಶಿಕ್ಷಣ ಉದ್ಯೋಗ ಆರೋಗ್ಯದ ಪ್ರಶ್ನೆಗಳನ್ನು ಮುಂಚೂಣಿಗೆ ತರಬೇಕಾಗಿದೆ.ಆದರೆ ಅವರು ಮತ್ತೆ ಧರ್ಮ ರಕ್ಷಣೆ, ಹಿಂದುತ್ವ ಎಂಬ ಹಳಸಿದ ವಿಚಾರಗಳನ್ನೇ ತರುತ್ತಿದ್ದಾರೆ.  ಈ ಬಾರಿ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಿರುವುದು ಜಿಲ್ಲೆಯಲ್ಲಿ ಅಶಾಭಾವನೆಯನ್ನು ಮೂಡಿಸಿದೆ.ಈ ವರ್ಷದ ಪ್ರಾರಂಭದಲ್ಲೇ ಬದಲಾವಣೆಯ ಗಾಳಿ ಬೀಸಲು ಪ್ರಾರಂಭವಾಗಿದೆ. ಅದು ಈಗ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿದೆ.ಎಪ್ರಿಲ್ 26ರಂದು ಬಿರುಗಾಳಿಯಾಗಿ ಮಾರ್ಪಾಟಾಗಲಿದೆ.ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಹಾಳುಗೆಡಹಿ ಅಭಿವೃದ್ಧಿಗೆ ಮಾರಕವಾದ ಬಿಜೆಪಿ ಸಂಘಪರಿವಾರವನ್ನು ಅರಬ್ಬೀ ಸಮುದ್ರಕ್ಕೆ ಎಸೆಯಲು ಜನತೆ ಸನ್ನದ್ದರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version