ಕೋಲಾರ ಉಸ್ತುವಾರಿ ಸಚಿವರಾಗಿ ರಾಮಲಿಂಗಾ ರೆಡ್ಡಿ; ಯು.ಟಿ.ಖಾದರ್ ಹರ್ಷ

Spread the love

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಆಯ್ಕೆಯಾದುದಕ್ಕೆ ನಿರ್ಗಮನ ಉಸ್ತುವಾರಿ ಸಚಿವ ಮತ್ತು ಪ್ರಸಕ್ತ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿಶ್ವ ಆರೋಗ್ಯ ಸಮಾವೇಶಕ್ಕಾಗಿ ನ್ಯೂಯಾರ್ಕ್ ತೆರಳಿರುವ ಖಾದರ್ ದೂರವಾಣಿ ಮೂಲಕ ನೂತನ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಶುಭಹಾರೈಸಿದರು.

ಹಿರಿಯರು ಹಾಗೂ ಅತ್ಯಂತ ಅನುಭವಿಯಾಗಿರುವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಕೋಲಾರ ಜಿಲ್ಲೆ ಅತ್ಯಂತ ಅಭಿವೃದ್ಧಿ ಹೊಂದಿ ಪರಿವರ್ತನೆಯಾಗಲೆಂದು ಯು.ಟಿ.ಖಾದರ್ ಶುಭಹಾರೈಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿ 2 ವರ್ಷ 5 ತಿಂಗಳು ಸೇವೆಗೈಯ್ಯಲು ಅವಕಾಶ ಮಾಡಿಕೊಟ್ಟ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಉಸ್ತುವಾರಿ ಕಾಲಾವಧಿಯಲ್ಲಿ ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡ, ಸಂಪೂರ್ಣ ಸಹಕಾರ ನೀಡಿದ ಕೋಲಾರದ ಜನತೆಗೆ, ಸಂಸದ ಕೆ.ಎಚ್. ಮುನಿಯಪ್ಪ ಅವರಿಗೆ, ಜಿಲ್ಲೆಯ ಶಾಸಕ ಮಿತ್ರರಿಗೆ, ಜಿಲ್ಲೆಯ ಎಲ್ಲಾ ಅಧಿಕಾರಿ ವರ್ಗಕ್ಕೆ, ಸ್ಥಳೀಯ ಜನಪ್ರತಿನಿಧಿಗಳಿಗೆ, ಪಕ್ಷದ ಅಧ್ಯಕ್ಷರಿಗೆ, ಸರ್ವ ಪಕ್ಷಗಳ ರಾಜಕೀಯ ಮುಖಂಡರಿಗೆ, ವಿವಿಧ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಸಂಘಸಂಸ್ಥೆಗಳಿಗೆ, ಜಿಲ್ಲೆಯ ಯುವಜನಾಂಗ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಜನತೆಯ ಪ್ರೀತಿ ವಿಶ್ವಾಸ ಸದಾ ಇರಲೆಂದು ಅವರು ಆಶಿಸಿದರು.


Spread the love