ಕೋಳಿ ಶೀತ ಜ್ಚರ ಮುಂಜಾಗ್ರತೆ ವಹಿಸಿ: ಜಿಲ್ಲಾಧಿಕಾರಿ ಜಿ ಜಗದೀಶ್
ಉಡುಪಿ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋಳಿ ಶೀತ ಜ್ವರ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಕೋಳಿ ಶೀತ ಜ್ವರದ ಕಣ್ಗಾವಲಿನ ಕ್ರಮ ಕೈಗೊಳ್ಳುವ ಸರ್ವೇಕ್ಷಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಳಿಶೀತ ಜ್ವರವು ಈಗಾಗಲೇ ಮೈಸೂರು ಮತ್ತು ದಾವಣಗೆರೆಯಲ್ಲಿ ಕಂಡು ಬಂದಿದ್ದು, ಜಿಲ್ಲೆಯ ಕೋಳಿ ಮಾರಾಟಗಾರರು, ಈ ಜಿಲ್ಲೆಗಳಿಂದ ಕೋಳಿಗಳನ್ನು ತರಿಸದಂತೆ ಸೂಚನೆಯನ್ನು ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೋಳಿ ಸಾಕಾಣಿಕ ಕೇಂದ್ರಗಳು, ಕೋಳಿ ಮಾಂಸ ಮಾರಾಟ ಕೇಂದ್ರಗಳು ಹಾಗೂ ಕೋಳಿ ಸಾಗಾಣಿಕೆ ವಾಹನಗಳ ಚಲನ-ವಲನಗಳ ಮೇಲೆ ನಿಗಾವಹಿಸಲಾಗುತ್ತಿದೆ, ಫಾರಂ ಮಾಲೀಕರು ಕೋಳಿ ಸಾಕಾಣಿಕೆ ಸ್ಥಳದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಫಾರಂಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅಗತ್ಯ ಸುರಕ್ಷಾ ವಸ್ತ್ರಗಳನ್ನು ಧರಿಸುವಂತೆ ಸೂಚಿಸಿದರು.
ಕೋಳಿ ಸಾಕಾಣಿದಾರರಿಗೆ, ಫಾರಂ ಮಾಲೀಕರಿಗೆ, ಕೆಲಸಗಾರರಿಗೆ, ಪಕ್ಷಿಧಾಮಗಳ ಹತ್ತಿರವಿರುವ ಸಾರ್ವಜನಿಕರಿಗೆ ಹಾಗೂ ರೈತರಿಗೆ ಹಕ್ಕಿ ಜ್ವರದ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿ ಅಗತ್ಯ ಅರಿವು ಮೂಡಿಸಲಾಗುವುದು ಎಂದರು.
ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ| ಹರೀಶ್ ತಾಮನಕರ್ ಜಿಲ್ಲಾಧಿಕಾರಿಗೆ ವರದಿಯನ್ನು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿ.ಎಚ್.ಓ ಸುಧೀರ್‍ಚಂದ್ರ ಸೂಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.