ಕೋವಿಡ್ -19; ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಸಾರ್ವಜನಿಕ ಗುಂಪು ಪ್ರವೇಶ ನಿಷೇಧ
ಉಡುಪಿ: ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ 144 (3) ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು ಸಭೆ ಸಮಾರಂಭಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಸಂತೆ ಜಾತ್ರೆ ಉತ್ಸವ, ಸಾಮೂಹಿಕ ವಿವಾಹಗಳು ಹಾಗೂ ಇನ್ನಿತರ ಜನಸಂದಣಿ ಸೇರು ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇರುವ ಕಾರಣದಿಂದ ಸರ್ಕಾರದ ಆದೇಶದಂತೆ ಮಾರ್ಚ್ 18ರಿಂದ ಸಿ ಆರ್ ಪಿ ಸಿ ಸೆಕ್ಷನ್ 114(3) ಜಾರಿ ಮಾಡಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದೆಂದು ಸೂಚಿಸಿದೆ. ಅಲ್ಲದೆ ವಾರದ ಸಂತೆಗಳನ್ನು ಕೂಡ ನಿರ್ಬಂಧಿಸಿದೆ.
ಅಲ್ಲದೆ ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳಲ್ಲಿ ಕೇವಲ ಧಾರ್ಮಿಕ ಕೇಂದ್ರಗಳ ಸಿಬಂದಿ ಮಾತ್ರ ಭಾಗವಹಿಸುವಂತೆ ಸೂಚಿಸಿದೆ. ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದೆ. ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನವನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ರದ್ದುಪಡಿಸಿದೆ ಹಾಗೂ ದೇವಸ್ಥಾನಗಳಿಗೆ ಬರುವ ಸಾರ್ವಜನಿಕರಿಗೆ ತಂಗಲು ಅವಕಾಶ ಇರುವುದಿಲ್ಲ.
ಬೇಸಿಗೆ ಶಿಬಿರ, ಸಮಾರಂಭಗಳು, ವಿಚಾರ ಸಂಕೀರ್ಣಗಳು, ಕ್ರೀಡಾಕೂಟಗಳು ಮತ್ತಿತರ ಯಾವುದೇ ಒಂದೆಡೆ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಆದೇಶಿಸಿದೆ. ಬೀಚ್/ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಮದುವೆ/ನಿಶ್ಚಿತಾರ್ಥ ಸಮಾರಂಭಗಳನ್ನು ಹೆಚ್ಚಿನ ಜನಸಂದಣಿ ಸೇರದಂತೆ ಸರಳವಾಗಿ ಆಯೋಜಿಸಲು ಸೂಚಿಸಿದೆ.