ಕೋವಿಡ್ -19: ಉಡುಪಿ ಸಿಪಿಐ ಮಂಜುನಾಥ್ ಅವರಿಂದ ವಿಭಿನ್ನ ರೀತಿಯಲ್ಲಿ ಮಾಸ್ಕ್ ಜಾಗೃತಿ
ಉಡುಪಿ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪತ್ರಿದಿನ ಹೆಚ್ಚಾಗುತ್ತಿದೆ. ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾಗಿದ್ದು, ಎಲ್ಲರಿಗೂ ಮನೆಯಿಂದ ಹೊರಬಾರದಂತೆ ಹಾಗೂ ತಮ್ಮ ಆರೋಗ್ಯದ ಸುರಕ್ಷತೆಯನ್ನು ನೋಡಿಕೊಳ್ಳುವಂತೆ ವಿವಿಧ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಅದಕ್ಕೆ ಪೂರಕವೆಂಬಂತೆ ಉಡುಪಿಯ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುವ ವ್ಯಕ್ತಿಗಳಿಗೆ ಉಚಿತ ಮಾಸ್ಕ್ ಹಂಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಇಂತಹ ಮಾದರಿ ಕೆಲಸಕ್ಕೆ ಕೈ ಹಾಕಿದ್ದು, ಅವರ ಈ ಕಾರ್ಯಕ್ಕೆ ಉಡುಪಿ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಪ್ರತಿಯೊಬ್ಬರೂ ಮಾಸ್ಕ್ ಹಾಕುವಂತೆ ಜಾಗೃತಿ ಮೂಡಿದ್ದು ಕೆಲವೊಮ್ಮೆ ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಇಲ್ಲ ಎನ್ನುವ ಕಾರಣಕ್ಕೆ ಮಾಸ್ಕ್ ಹಾಕದೆ ಸಂಚರಿಸುವವರು ಹೆಚ್ಚು ಹೆಚ್ಚು ಕಾಣಸಿಗುತ್ತಾರೆ. ಅಲ್ಲದೆ ಲಾಕ್ ಡೌನ್ ಪರಿಣಾಮ ಹೋಟೆಲ್ ಅಥವಾ ಊಟದ ಮೂಲಗಳೇ ಇಲ್ಲದೆ ಕೆಲವೊಮ್ಮೆ ಜನರು ಪರದಾಡಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿ ನಾನು ಯಾವಾಗಲೂ ನನ್ನ ವಾಹನದಲ್ಲಿ ಸ್ವಲ್ಪ ಮಾಸ್ಕ್, ನೀರು, ಬ್ರೆಡ್, ಟೋಸ್ಟ್ ಇಡುತ್ತಿದ್ದು ಅಂತಹ ಅಗತ್ಯ ಎಂದು ಕಂಡು ಬಂದ ವ್ಯಕ್ತಿಗೆ ನೀಡುತ್ತೇನೆ ಎಂದರು.