ಕೋವಿಡ್-19 ಘಟನೆ; ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಶಾಸಕ ರಘುಪತಿ ಭಟ್ ಸಭೆ
ಉಡುಪಿ: ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆದ ಎರಡು ಘಟನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಸೋಮವಾರ ಶಾಸಕರು, ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿ ವಿವರಣೆ ಪಡೆದು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಶಾಸಕ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಷಯದ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು.
ಸಭೆಯಲ್ಲಿ ಶಾಸಕ ಕೆ ರಘುಪತಿ ಭಟ್ ಅವರ ಸೂಚನೆ ಮೇರೆಗೆ ಮುಂದಿನ ದಿನಗಳಲ್ಲಿ ಮೃತದೇಹ ಸಾಗಿಸುವಾಗ ಅದು ಕೋವಿಡ್-19 ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿ ಮೃತದೇಹವನ್ನು ಸಂಬಂಧಿಸಿದ ಕುಟುಂಬದವರಿಗೆ ತೋರಿಸಿ ಕಳುಹಿಸಬೇಕು. ಕೋವಿಡ್ – 19 ಪಾಸಿಟಿವ್ ಮೃತದೇಹ ಪಡೆಯುವಾಗ ಒಬ್ಬ ಆರೋಗ್ಯ ಅಧಿಕಾರಿ ಸ್ಥಳದಲ್ಲಿ ಇದ್ದು ಪರಿಶೀಲಿಸಿ ಪಡೆಯಬೇಕು.ಸಂಜೆ 6ರಿಂದ ಬೆಳಗ್ಗೆ 9 ಗಂಟೆವರೆಗೆ ಯಾವುದೇ ಶವವನ್ನು ಬಿಟ್ಟು ಕೊಡಬಾರದು.ಶವ ಬಿಟ್ಟುಕೊಡುವ ಜವಾಬ್ದಾರಿ ವೈದ್ಯರಿಗೆ ಇರಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಯಾವುದೇ ಅಜಾಗರೂಕತೆಗೆ ಅವಕಾಶ ನೀಡದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಮಧುಸೂದನ್, ಡಾಕ್ಟರ್ ಚಂದ್ರಶೇಖರ್ ಅಡಿಗ, ಆಮ್ನ ಹೆಗ್ಗಡೆ ಹಾಗೂ ಇತರ ವೈದ್ಯರು ಉಪಸ್ಥಿತರಿದ್ದರು.