ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ, ಅಪಪ್ರಚಾರಕ್ಕೆ ಕಿವಿಗೊಡಬೇಡಿ,: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ಕೋವಿಡ್-19 ಕುರಿತಂತೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡದೇ, ಜ್ವರ, ಶೀತ, ಕೆಮ್ಮು ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷಿಸಿಕೊಳ್ಳಬೇಕು, ಆ ಮೂಲಕ ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ 12149 ಮಂದಿ ಕೋವಿಡ್ ಸೋಂಕಿತರಾಗಿದ್ದು , 105 ಮಂದಿ ಮರಣಹೊಂದಿದ್ದು, 55 ರಿದ 64 ವಯೋಮಿತಿಯ 1315 ಸೋಂಕಿತರಲ್ಲಿ 25 ಮಂದಿ ಮತ್ತು 65 ವರ್ಷ ಮೇಲ್ಪಟ್ಟ 1161 ಕೋವಿಡ್ ಸೋಂಕಿತರಲ್ಲಿ 51 ಮಂದಿ ಮರಣಹೊಂದಿದ್ದಾರೆ. ಸಾರ್ವಜನಿಕರು ಜ್ವರ, ಶೀತ, ಕೆಮ್ಮು ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಹಿರಿಯ ಜೀವಗಳನ್ನು ಉಳಿಸಲು ಸಾಧ್ಯವಿದೆ , ರೋಗಲಕ್ಷಣಗಳಿದ್ದು ಮನೆಯಲ್ಲಿಯೇ ಇದ್ದು , ಕೊನೆಯ ಸಮಯದಲ್ಲಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡುವುದು ಕಷ್ಟವಾಗಲಿದೆ ಎಂದು ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಿದ್ದ ಸಮಯದಲ್ಲಿ ಶೀಘ್ರದಲ್ಲಿ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡುತ್ತಿದ್ದುದರಿಂದ ಸಾವಿನ ಪ್ರಮಾಣ ಕಡಿಮೆ ಇತ್ತು, ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ 19 ಕುರಿತು ಪ್ರಸಾರವಾದ ಅಪಪ್ರಚಾರದಿಂದ , ಸಾರ್ವಜನಿಕರಲ್ಲಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳುವ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದಾಗಿ ಕೋವಿಡ್ ಸೋಂಕಿತರು ಆರೋಗ್ಯವಾಗಿದ್ದರೂ ರೋಗವನ್ನು ಸಮಾಜದಲ್ಲಿನ ಹಿರಿಯ ಜೀವ ಗಳಿಗೆ ಹರಡುತ್ತಿರುವುದರಿಂದ ಹಾಗೂ ರೋಗ ಲಕ್ಷಣವಿದ್ದವರು ರೋಗ ಉಲ್ಬಣಗೊಂಡಗೊಂಡ ನಂತರ ಚಿಕಿತ್ಸೆಗಾಗಿ ನೇರ ಐಸಿಯು ಬೆಡ್ ಗೆ ದಾಖಲಾಗುತ್ತಿರುವುದರಿಂದ , ಜಿಲ್ಲೆಯಲ್ಲಿ ಕೋವಿಡ್ ಗೆ ಈಗಾಗಲೇ ಮೀಸಲಿಟ್ಟಿದ್ದ ಎಲ್ಲಾ 82 ಐಸಿಯು ಬೆಡ್ ಗಳು ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಕಳವಳ ವ್ಯಕ್ತಪಡಿಸಿದರು.
ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಪರೀಕ್ಷೆಗೆ ನಿರಾಕರಿಸಿದರೆ ಅವರ ವಿರುದ್ದ ಎಪಿಡಮಿಕ್ ಕಾಯ್ದೆಯನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ ಜಿಲ್ಲಾದಿಕಾರಿ ಜಿ.ಜಗದೀಶ್, ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ಕುರಿತು ಸಹ ಕ್ರಮ ಕೈಗೊಳ್ಳಲಾಗುವುದು , ಈಗಾಗಲೇ 3 ಮಂದಿಯ ವಿರುದ್ದ ಎಫ್.ಐ.ಆರ್. ದಾಖಲಿಸಿದೆ ಎಂದರು.
ಕೋವಿಡ್ -19 ರೋಗಿಗಳಿಗೆ ಎಪಿಲ್ . ಬಿಪಿಎಲ್ ಭೇಧವಿಲ್ಲದೇ ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಿದ್ದು, ಜಿಲ್ಲಾಡಳಿತದ ರೆಫರಲ್ ಪಡೆಯದೇ ನೇರವಾಗಿ ಖಾಸಗಿ ಆಸ್ಪತೆಗಳಿಗೆ ದಾಖಲಾಗಿ, ವಿಶೇಷ ವಾಡ್ ್ ಸೌಲಭ್ಯ ಪಡೆಯುವವರು ಮಾತ್ರ ಬಿಲ್ ಭರಿಸಬೇಕಿದೆ , ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ಚಕಿತ್ಸೆಗಾಗಿ ಸಾಕಷ್ಟು ಸಂಖ್ಯೆಯ ಬೆಡ್ ಗಳು ಲಭ್ಯವಿವೆ ಎಂದು ಡಿಸಿ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಕೋವಿಡ್ -19 ಚಕಿತ್ಸೆಗೆ ಐ.ಸಿ.ಯು ಗಳು ಭರ್ತಿಯಾಗಿದ್ದು, ಖಾಸಗಿ ಅಸ್ಪತ್ರೆಗಳಲ್ಲಿ ನಿಗಧಿತ ಸಂಖ್ಯೆಯ ಐ.ಸಿ.ಯು ಬೆಡ್ಗಳನ್ನು ಒದಗಿಸುವಂತೆ ಕೋರಲಾಗಿದೆ, ಸಾರ್ವಜನಿಕರು ಅಪಪ್ರಚಾರಕ್ಕೆ ಕಿವಿಗೊಡದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕ ರಘುಪತಿಭಟ್ ಹೇಳಿದರು.
ಶಾಸಕ ಲಾಲಾಜಿ ಆರ್ ಮೆಂಡನ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವಪ್ರಭು, ಡಿಹೆಚ್ಓ ಡಾ.ಸುದೀರ್ ಚಂದ್ರ ಸೂಡಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಕೋವಿಡ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೈದ್ಯ ಡಾ. ಶಶಿಕಿರಣ್ ಉಪಸ್ಥಿತರಿದ್ದರು.