ಕೋವಿಡ್-19 ಲಾಕ್ ಡೌನ್ : ನಮ್ಮೂರು ಬಾರಕೂರು ಫೇಸ್ಬುಕ್ ತಂಡದಿಂದ ಸಂಕಷ್ಟದಲ್ಲಿರುವವರಿಗೆ 500 ಕಿಟ್ ವಿತರಣೆ

Spread the love

ಕೋವಿಡ್-19 ಲಾಕ್ ಡೌನ್ : ನಮ್ಮೂರು ಬಾರಕೂರು ಫೇಸ್ಬುಕ್ ತಂಡದಿಂದ ಸಂಕಷ್ಟದಲ್ಲಿರುವವರಿಗೆ 500 ಕಿಟ್ ವಿತರಣೆ

ಬ್ರಹ್ಮಾವರ: ನಮ್ಮೂರು ಬಾರಕೂರು ಫೇಸ್ಬುಕ್ ತಂಡವು ಕೋವಿಡ್-19 ಲಾಕ್ ಡೌನ್ ಸಂಕಷ್ಟದಲ್ಲಿರುವವರ ಸಹಾಯಹಸ್ತ ಯೋಜನೆ ಕಿಟ್ ವಿತರಣಾ ಕಾರ್ಯಕ್ಕೆ ಬಾರಕೂರು ಮೆರಿನೋಲ್ ಹೈಸ್ಕೂಲ್ ಅಲ್ಲಿ ಅತಿಥಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಬಾರಕೂರು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರನ್ನು , ಬಾರಕೂರು ವಿಭಾಗದ ಮೆಸ್ಕಾಂ ಸಿಬ್ಬಂದಿ ಯವರನ್ನು,ಪೌರ ಕಾರ್ಮಿಕರನ್ನು ಅಭಿನಂದಿಸಿ ಗೌರವಿಸಲಾಯಿತು
ಸಾಮಾಜಿಕ ಅಂತರವನ್ನು ಕಾಪಾಡಿ ಕೊಂಡ ಈ ಸರಳ ಸಮಾರಂಭದಲ್ಲಿ ಅತಿಥಿಗಳಾಗಿ ಬಾರಕೂರು ಸಂತ ಪೀಟರ್ ಚರ್ಚಿನ ಧರ್ಮಗುರು ವಂ|ಫಿಲಿಪ್ ನೇರಿ ಆರಾನ್ಹಾ, ಬ್ರಹ್ಮಾವರ ಪೊಲೀಸ್ ಠಾಣೆಯ ಉಪನೀರಿಕ್ಷಕ ರಾಘವೇಂದ್ರ, ಉದ್ಯಮಿ ಬಿ ಶಾಂತರಾಮ್ ಶೆಟ್ಟಿ, ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಡಿಸೋಜಾ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಬ್ರಹ್ಮಾವರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಿ.ರಾಘವೇಂದ್ರ ಸಾಮಾಜಿಕ ಜಾಲತಾಣವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಎನ್ನುವುದನ್ನು ನಮ್ಮೂರು ಬಾರ್ಕೂರು ಇದರ ಸದಸ್ಯರು ತೋರಿಸಿದ್ದು ಸಮಾಜಕ್ಕೆ ಮಾದರಿ ಎನಿಸುವಂತದ್ದಾಗಿದೆ ಎಂದರು. ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆ ಮತ್ತು ಚರ್ಚೆಗಳಿಗೆ ಎನ್ನುವುದನ್ನು ತೊಡೆದು ಹಾಕಿ ದೇಶದ ಇಂದಿನ ಸಂದಿಗ್ದ ಸ್ಥಿತಿಗೆ ಉಪಕಾರ ವಾಗುವಂತ ಕೆಲಸ ಮಾಡಿ ಮಾದರಿಯಾಗಿದೆ.

ಬಾರಕೂರು ಸಂತ ಪೀಟರ್ ಚರ್ಚಿನ ಧರ್ಮಗುರು ವಂ|ಫಿಲಿಪ್ ನೇರಿ ಆರಾನ್ಹಾ, ಉದ್ಯಮಿ ಬಿ ಶಾಂತರಾಮ್ ಶೆಟ್ಟಿ, ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಡಿಸೋಜಾ ಸಂಘಟಕರ ಸಮಾಜಮುಖಿ ಸೇವೆಗೆ ಅಭಿನಂದಿಸುವುದರೊಂದಿಗೆ ಕೇವಲ 4 ದಿನಗಳ ಅಂತರದಲ್ಲಿ ಗ್ರೂಫ್ ಸದಸ್ಯ ರಿಂದ ಸುಮಾರು 3 ಲಕ್ಷ ರೂಪಾಯಿ ಧನ ಸಹಾಯವನ್ನು ಕ್ರೋಡೀಕರಿಸಿ 500 ಕಿಟ್ ಸಿದ್ದ ಪಡಿಸಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲ ತಾಣವನ್ನು ಕೇವಲ ಮನೋರಂಜನೆಗೆ ಸೀಮಿತ ಗೊಳಿಸದೆ ,ಇಂತ ಸಂದಿಗ್ದ ಪರಿಸ್ಥಿತಿ ಯಲ್ಲಿ ಸಮಾಜಕ್ಕೆ ಏನಾದರು ನೆರವು ಸಿಗ ಬೇಕೆಂಬ ಒಂದು ಸದ್ದುದ್ದೇಶ ಹೊಂದಿರುವ ಸಂಘಟಕರ ಕಾಳಜಿ ಅಭಿನಂದನೀಯ. ಸರಕಾರದ ಆದೇಶದಂತೆ ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅನಗತ್ಯ ವಾಗಿ ಮನೆಯಿಂದ ಹೊರಗೆ ಬರುವುದನ್ನು ಆದಷ್ಟು ಕಡಿಮೆ ಮಾಡಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸರಕಾರದ ಜೊತೆ ಕೈ ಜೋಡಿಸ ಬೇಕೆಂದು ವಿನಂತಿಸಿಕೊಂಡರು.

ಸಿಸ್ಟರ್ ಜಾಸ್ಮಿತ್ ಕ್ರಾಸ್ತಾ , ಗ್ರೂಪ್ ಆಡ್ಮಿನ್ ಗಳಾದ ಆಲ್ವಿನ್ ಅಂದ್ರಾದೆ , ಆನಂದ ಬಾರಕೂರು , ಗಣೇಶ್ ಶೆಟ್ಟಿ , ಮಾಲಾ ಸಂತೋಷ ಶೆಟ್ಟಿ ಉಪಸ್ಥಿತರಿದ್ದರು. ಅಭಿ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದ್ದರು.

ಈಗಾಗಲೇ ಕಿಟ್ ಗಳನ್ನು ನಿರ್ದಿಷ್ಟ ಫಲಾನುಭವಿ ಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಸದಸ್ಯರ ಸಹಕಾರ ದೊಂದಿಗೆ ಆರಂಭಿಸಿದ್ದು,ಒಂದೆರಡು ದಿನಗಳಲ್ಲಿ 500 ಕಿಟ್ ಗಳನ್ನು ಆಯ್ದ ಫಲಾನುಭವಿ ಗಳಿಗೆ ತಲುಪಿಸುವವ ವ್ಯವಸ್ಥೆ ಮಾಡಲಾಗುವುದು ಸಂಘಟಕರ ಪ್ರಕಟಣೆ ತಿಳಿಸಿದೆ.


Spread the love