Home Mangalorean News Kannada News ಕೋವಿಡ್-19 ಸಭೆಯಲ್ಲಿ ಶಾಸಕ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರ ‘ಟಾಕ್ ವಾರ್’

ಕೋವಿಡ್-19 ಸಭೆಯಲ್ಲಿ ಶಾಸಕ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರ ‘ಟಾಕ್ ವಾರ್’

Spread the love

ಕೋವಿಡ್-19 ಸಭೆಯಲ್ಲಿ ಶಾಸಕ ಖಾದರ್ ಮತ್ತು ವೇದವ್ಯಾಸ ಕಾಮತ್ ಅವರ ‘ಟಾಕ್ ವಾರ್’

ಮಂಗಳೂರು: ದಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸ್ಥಿತಿಗತಿ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವಿನ ವಾಗ್ವಾದಕ್ಕೆ ಸಾಕ್ಷಿಯಾಯಿತು.

ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಚ್ಚನಾಡಿ ಸ್ಮಶಾನದಲ್ಲಿ ಬಂಟ್ವಾಳದ ಕೋವಿಡ್ -19 ಸೋಂಕಿತರ ಶವ ಸಂಸ್ಕಾರಕ್ಕೆ ಶಾಸಕರೇ ಅವಕಾಶ ನಿರಾಕರಿಸಿರುವ ಬಗ್ಗೆ ಶಾಸಕ ಯು ಟಿ ಖಾದರ್ ವಿಷಯ ಪ್ರಸ್ತಾಪಿಸಿದರು. ಸಭೆಯಲ್ಲಿ ಕೈಗೊಳ್ಳುವ ನಿರ್ಣಯವನ್ನು ಜನಪ್ರತಿನಿಧಿಗಳಗೆ ಉಲ್ಲಂಘಿಸಿದರೆ ಹೇಗೆ ಎಂದು ಖಾದರ್ ಪ್ರಶ್ನಿಸಿದರು.

ಇದಕ್ಕೆ ಮಧ್ಯಪ್ರವೇಶಿಸಿದ ಶಾಸಕ ವೇದವ್ಯಾಸ ಕಾಮತ್ ಅಂತರ್ ಜಿಲ್ಲೆ ಪ್ರಯಾಣಿಕರ ಸಂಚಾರ ನಿರ್ಬಂಧ ಇದ್ದರೂ ಇಟಲಿಯಿಂದ ವಿದ್ಯಾರ್ಥಿಯನ್ನು ಕರೆದುಕೊಂಡು ಬಂದು ನಿಯಮ ಉಲ್ಲಂಘಿಸಿದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಖಾದರ್ ಬೆಂಬಲಕ್ಕೆ ನಿಂತರು.

ಆಗ ಶಾಸಕ ವೇದವ್ಯಾಸ್‌ ಕಾಮತ್‌ “ಲಾಕ್‌ಡೌನ್‌ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಖಾದರ್‌ ಅವರು ಬೇರೆ ಜಿಲ್ಲೆಯಲ್ಲಿದ್ದವರನ್ನು ಕಾರಲ್ಲಿ ಕರೆದುಕೊಂಡು ಬರುತ್ತಿರುವುದು ಸರಿಯಾದ ನಿರ್ಧಾರವೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಖಾದರ್‌, “ಬೇರೆ ಜಿಲ್ಲೆಯಲ್ಲಿ ಬಾಕಿಯಾದವರನ್ನು ಮಾನವೀಯ ದೃಷ್ಟಿಯಿಂದ ಕರೆ ತಂದಿರಬಹುದು. ಇದರಲ್ಲಿ ರಾಜ ಕೀಯ ಇಲ್ಲ’ ಎಂದರು.

ಯು.ಟಿ. ಖಾದರ್‌ ಅವರನ್ನು ಬೆಂಬಲಿಸಿದ ಐವನ್‌ ಡಿ’ಸೋಜಾ, “ಲಾಕ್‌ಡೌನ್‌ ಮಧ್ಯೆ ಜಲ್ಲಿ, ಕಲ್ಲು ಸಾಗಾಟದ ಲಾರಿಗೆ ಅನುಮತಿ ನೀಡುವಂತೆ ಶಾಸಕರೊಬ್ಬರು ಪತ್ರ ನೀಡಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು. ಈ ರೀತಿಯಾಗಿ ಬಿಜೆಪಿ- ಕಾಂಗ್ರೆಸ್‌ ಶಾಸಕರ ಮಧ್ಯೆ ಕೆಲವೊಂದು ವಿಚಾರವಾಗಿ ಆರೋಪ – ಪ್ರತ್ಯಾರೋಪಗಳು ನಡೆದವು.

ನಿಯಮ ಉಲ್ಲಂಘನೆ ವಿಚಾರದಲ್ಲಿ ಶಾಸಕರಾದ ಯು ಟಿ ಖಾದರ್, ಐವನ್ ಡಿಸೋಜಾ ಹಾಗೂ ಹರೀಶ್ ಕುಮಾರ್ ಸೇರಿ ಬಿಜೆಪಿ ಶಾಸಕರ ವಿರುದ್ದ ಹರಿಹಾಯ್ದರೆ ಶಾಸಕರಾದ ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ಹರೀಶ್ ಪೂಂಜಾ ಸೇರಿ ಕಾಂಗ್ರೆಸ್ ಶಾಸಕರ ವಿರುದ್ದ ಮುಗಿಬಿದ್ದರು. ಸಭಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಇವರುಗಳನ್ನು ಸಮಾಧಾನಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.

ಶಾಸಕರ ಈ ವರ್ತನೆಗೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಪೊಲೀಸ್ ಕಮೀಷನರ್ ಡಾ ಹರ್ಷ ಸೇರಿದಂತೆ ವೇದಿಕೆಯಲ್ಲಿದ್ದ ಹಾಗೂ ಸಭಾಂಗಣದಲ್ಲಿದ್ದ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ನೋಡಬೇಕಾಯಿತು.

ಸಭೆಯ ಬಳಿಕ ಎಲ್ಲರೂ ಸಭೆಯಿಂದ ನಿರ್ಗಮಿಸುತ್ತಿದ್ದಂತೆ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಯು ಟಿ ಖಾದರ್ ಪರಸ್ಪರ ಹೆಗಲಿಗೆ ಕೈ ಹಾಕಿಕೊಂಡು ಏನೂ ನಡೆದೇ ಇಲ್ಲ ಎಂಬಂತೆ ಅಲ್ಲೇ ಸ್ವಲ್ಪ ಹೊತ್ತು ಹರಟುವ ಮೂಲಕ ಅಲ್ಲಿದ್ದವರಲ್ಲಿ ಅಚ್ಚರಿ ಮೂಡಿಸಿದರು.


Spread the love

Exit mobile version