ಕೋವಿಡ್ -19 : ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಸಂದೇಶ ಹರಡಿದ ಆರೋಪ – ಇಬ್ಬರ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ -19 ರ ಕುರಿತು ಪ್ರಚೋದನಾತ್ಮಕ ಸಂದೇಶಗಳನ್ನು ಹರಡಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಮೊಹ್ಮದ್ ಇಲ್ಯಾಸ್ ಮತ್ತು ಅಬ್ದುಲ್ ಬಶೀರ್ ಎಂದು ಗುರುತಿಸಲಾಗಿದ್ದು ಇಬ್ಬರೂ ಕೂಡ ಮೈಕಾಲ್ತೊ ಬಿಸಿಯಾ ಫೇಸ್ ಬುಕ್ ಪೇಜ್ ನೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಇಬ್ಬರು ಆರೋಪಿಗಳು ಮೈಕಾಲ್ತೊ ಬಿಸಾಯ ಫೇಸ್ ಬುಕ್ ಪೇಜಿನ ಮೂಲಕ ಪ್ರಧಾನಿ ಮತ್ತು ಗೃಹಸಚಿವರು ಸೇರಿದಂತೆ ದೇಶದ ಸರ್ಕಾರಿ ಕಾರ್ಯಕರ್ತರ ವಿರುದ್ದ ತಪ್ಪು ಮಾಹಿತಿ ಹಾಗೂ ಪ್ರಚೋದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಆರೋಪಿಗಳು ಪಿಎಫ್ಐ ಮತ್ತು ಎಸ್ಡಿಪಿಐ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶಾಲ ಜಾಲದ ವಿವರಗಳನ್ನು ನೀಡಿದ್ದಾರೆ. ಸೈಬರ್ ಅಪರಾಧ ತಂಡವು ಎಲ್ಲಾ ಅಪರಾಧಿಗಳನ್ನು ಪತ್ತೆ ಹಚ್ಚುತ್ತಿದೆ
ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ಸೆ. 67 ಮಾಹಿತಿ ತಂತ್ರಜ್ಞಾನ ಕಾಯ್ದೆ, 54 ವಿಪತ್ತು ನಿರ್ವಹಣಾ ಕಾಯ್ದೆ 2005, ಮತ್ತು ಸೆಕ್ಷನ್ 188, 153 ಮತ್ತು 505 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ..