ಕೋವಿಡ್  19 ; ಹೋಮ್ ಕ್ವಾರಂಟೈನ್ ಉಲ್ಲಂಘಿಸಿದವರ ಪಾಸ್ ಪೋರ್ಟ್ ಮುಟ್ಟುಗೋಲು – ಡಿಸಿ ಜಗದೀಶ್ ಎಚ್ಚರಿಕೆ

Spread the love

ಕೋವಿಡ್  19 ; ಹೋಮ್ ಕ್ವಾರಂಟೈನ್ ಉಲ್ಲಂಘಿಸಿದವರ ಪಾಸ್ ಪೋರ್ಟ್ ಮುಟ್ಟುಗೋಲು – ಡಿಸಿ ಜಗದೀಶ್ ಎಚ್ಚರಿಕೆ

ಉಡುಪಿ: ಕೋವಿಡ್  19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಹೋಮ್ ಕ್ವಾರಂಟೈನ್ ್ಲಿ ಇರಬೇಕಾದ ವ್ಯಕ್ತಿಗಳು ನಿಯಮ ಪಾಲಿಸದೆ ಹೊರಗಡೆ ತಿರುಗಾಡದೆ ಆದೇಶ ಉಲ್ಲಂಘನೆ ಮಾಡಿದವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವುದಲ್ಲದೆ, ಅಂತಹವರ ಪಾಸ್ ಪೋರ್ಟನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸೆಕ್ಷನ್ 144(3) ರಂತೆ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶವನ್ನು ಹೊರಡಿಸಲಾಗಿದೆ ಹಾಗೂ ವಿದೇಶದಿಂದ/ಹೊರ ರಾಜ್ಯಗಳಿಂದ ಬಂದಿರುವ ಹಾಗೂ ಜಿಲ್ಲೆಯಲ್ಲಿ ಸೋಂಕು ತಗಲಿರುವ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಚಿಕಿತ್ಸೆಗಳಿಗಾಗಿ ಹೋಮ್ ಕ್ವಾರಂಟೈನ್ ನಲ್ಲೇ ಇರುವಂತೆ ಹಾಗೂ ಗ್ರಾಮ ಕರಣಿಕರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಸಿಬಂದಿಯವರು ಕನಿಷ್ಠ 3 ಬಾರಿ ಸದ್ರಿಯವರ ಮನೆಗಳಿಗೆ ಭೇಟಿ ನೀಡುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಅಲ್ಲದೆ ಹೋಮ್ ಕ್ವಾರಂಟೈನ್ ಆದೇಶಗಳನ್ನು ಪಾಲೀಸದೇ ಇರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲು ಅಧಿಕಾರವನ್ನು ಈಗಾಗಲೇ ಪ್ರತ್ಯಾಯೋಜಿಸಲಾಗಿದೆ.

ಆದರೆ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾದ ಸಾಕಷ್ಟು ಜನರು ನಿಯಮಗಳನ್ನು ಪಾಲಿಸದೇ ಹೊರಗಡೆ ಹೋಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ದೂರುಗಳು ಬರುತ್ತಿದ್ದು ವಿದೇಶದಿಂದ ಬಂದಿರುವವರು ಹಾಗೂ ಹೋಮ್ ಕ್ವಾರಂಟೈನ್ ನಲ್ಲಿರಬೇಕಾದ ಎಲ್ಲಾ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಮನೆಯಲ್ಲೇ ಇರುವಂತೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತಾ ಈ ಆದೇಶವನ್ನು ಉಲ್ಲಂಘಿಸಿ ಯಾರಾದಾರೂ ಹೊರಗಡೆ ಬಂದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಅಂತಹವರ ಪಾಸ್ ಪೋರ್ಟನ್ನು ಮುಟ್ಟುಗೋಲು ಹಾಕಿ ಮುಂದಿನ ವಿದೇಶ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲವೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


Spread the love