ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

Spread the love

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು
 

ಕಡಬ: ಕೌಕ್ರಾಡಿ ಗ್ರಾಮದ ಕಾಪಿನಬಾಗಿಲಿನ ಸರಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ವಾಸ್ತವ್ಯವಿದ್ದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಯ ಗುಡಿಸಲನ್ನು ನ್ಯಾಯಾಲಯದ ಆದೇಶ ಎನ್ನುವ ಕಾರಣ ಮುಂದಿಟ್ಟುಕೊಂಡು ಬುಧವಾರ (ನ. 13) ಮುಂಜಾನೆ ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದು, ದಂಪತಿ ಬೀದಿಗೆ ಬೀಳುವಂತಾಗಿದೆ.

ಕಡಬ ತಹಶೀಲ್ದಾರ್‌ ಪ್ರಭಾಕರ ಖಜೂರೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್‌, ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ಉಪಸ್ಥಿತ ರಿದ್ದರು. ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ರಾಧಮ್ಮ ಮತ್ತು ಮುತ್ತುಸ್ವಾಮಿ ಕಾಪಿನಬಾಗಿಲಿನ ಸರಕಾರಿ ಜಾಗದ ಸರ್ವೆà ನಂಬರ್‌ 123/1ರಲ್ಲಿ 6 ವರ್ಷಗಳಿಂದ ವಾಸವಿದ್ದರು. ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಇವರು 6 ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದರು. ತಾವು ಕೂಡಿಟ್ಟ 50 ಸಾವಿರ ರೂ. ಗಳನ್ನು ಸ್ಥಳೀಯರೊಬ್ಬರಿಗೆ ನೀಡಿ ಅವರ ವಶದಲ್ಲಿದ್ದ ಸರಕಾರಿ ಜಾಗವನ್ನು ತೆಗೆದುಕೊಂಡು ಅಲ್ಲಿ ಪುಟ್ಟ ಗುಡಿಸಲು ನಿರ್ಮಿಸಿ ದನಕರುಗಳನ್ನು ಸಾಕುತ್ತಾ ಜೀವಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ತಾವು ವಾಸವಿರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿ¨ª‌ರು ಎನ್ನಲಾಗಿದೆ.

ಈ ನಡುವೆ ಬೆಳ್ತಂಗಡಿ ತಾಲೂಕಿನ ಅಶೋಕ್‌ ಆಚಾರ್ಯ ಅವರು ವೃದ್ಧ ದಂಪತಿಯನ್ನು ಒಕ್ಕಲೆಬ್ಬಿಸುವ ಸಲುವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಕಾರಣ ನ್ಯಾಯಾಲಯದ ಆದೇಶದಂತೆ ಅವರ ಗುಡಿಸಲನ್ನು ತೆರವುಗೊಳಿಸಲು ಕಂದಾಯ ಅಧಿಕಾರಿಗಳು ಕಳೆದ ಫೆಬ್ರವರಿ ತಿಂಗಳಲ್ಲಿ ನೋಟಿಸ್‌ ನೀಡಿದ್ದರು. ಮನೆಯ ಬಾಗಿಲಿಗೆ ನೋಟಿಸ್‌ ಹಚ್ಚಿದ ಬಳಿಕ ದಿಕ್ಕು ತೋಚದಂತಾಗಿದ್ದ ದಂಪತಿ, ತಾವು ಸರಕಾರಿ ಜಮೀನಿನಲ್ಲಿ ನಿರ್ಮಿಸಿರುವ ಸಣ್ಣ ಗುಡಿಸಲಿನಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ ಎಂದು ಕಡಬ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದರು.

ಈ ವೃದ್ಧ ದಂಪತಿಯಲ್ಲಿ ಅವರು ಪ್ರಸ್ತುತ ವಾಸ್ತವ್ಯ ಇರುವ ಜಾಗದ ವಿಳಾಸದ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಮತದಾನದ ಗುರುತಿನ ಚೀಟಿ ಸಹಿತ ಎಲ್ಲ ದಾಖಲೆಗಳೂ ಇವೆ. ಮನೆಗೆ ವಿದ್ಯುತ್‌ ಸಂಪರ್ಕವನ್ನೂ ನೀಡಲಾಗಿತ್ತು. ಅವರಿಗೆ ನ್ಯಾಯಬೆಲೆ ಅಂಗಡಿಯಿಂದ ರೇಷನ್‌ ಕೂಡ ನೀಡಲಾಗುತ್ತಿತ್ತು. ಆದರೆ ಈಗ ಅಕ್ರಮ ಎನ್ನುವ ಹೆಸರಿನಲ್ಲಿ ಗುಡಿಸಲನ್ನು ನಿರ್ದಾಕ್ಷಿಣ್ಯವಾಗಿ ನೆಲಸಮಗೊಳಿಸಲಾಗಿದೆ.

ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಅಗಮಿಸಿದ ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್‌ ಟಿ. ಹಾಗೂ ಕೆಆರ್‌ಎಸ್‌ ಪಕ್ಷದ ಮುಂದಾಳು ವೇಣುಗೋಪಾಲ್‌ ಅವರು ಸ್ಥಳೀಯರ ಜತೆ ಸಂತ್ರಸ್ತ ವೃದ್ಧ ದಂಪತಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಸಂಜೆಯ ತನಕ ಸ್ಥಳದಲ್ಲೇ ಧರಣಿ ನಡೆಸಿದರು. ನ್ಯಾಯ ಸಿಗುವ ತನಕ ನಾವು ವಿರಮಿಸುವುದಿಲ್ಲ. ಸಂತ್ರಸ್ತ ವೃದ್ಧ ದಂಪತಿ ಜೊತೆಗೆ ಅವರ ದನಕರು, ಮನೆಯಿಂದ ಹೊರ ಹಾಕಿರುವ ಸರಂಜಾಮುಗಳ ಜತೆಗೆ ಕಡಬ ತಹಶೀಲ್ದಾರ್‌ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments