ಕೌಟುಂಬಿಕ ಕಲಹ: ಸೇತುವೆಯಿಂದ ನದಿಗೆ ಜಿಗಿದ ಛಾಯಾಗ್ರಾಹಕ!
- ಸಾಂಸಾರಿಕ ಜಗಳ ಪೊಲೀಸ್ ಠಾಣೆಯಲ್ಲಿ ಇತ್ಯರ್ಥಗೊಂಡು ಮನೆಗೆ ತೆರಳುತ್ತಿರುವಾಗ ಘಟನೆ
ಕುಂದಾಪುರ: ಛಾಯಾಗ್ರಾಹಕನೋರ್ವ ಸೇತುವೆಯಿಂದ ನದಿಗೆ ಜಿಗಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರಿನಲ್ಲಿ ಮಂಗಳವಾರ ನಡೆದಿದೆ.
ಕಾಳಾವರ ನಿವಾಸಿ ಹರೀಶ್ ಕಾಳಾವರ (40) ನದಿಗೆ ಜಿಗಿದು ನಾಪತ್ತೆಯಾದ ಛಾಯಾಗ್ರಾಹಕ.
ವೃತ್ತಿಯಲ್ಲಿ ಛಾಯಾಗ್ರಾಹಕನಾಗಿರುವ ಹರೀಶ್ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ಇವರಿಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಮಂಗಳವಾರವೂ ಜಗಳ ತಾರಕಕ್ಕೇರಿದ ಪರಿಣಾಮ ಈ ಪ್ರಕರಣ ಕಂಡ್ಲೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಂಗಳವಾರ ಇಬ್ಬರನ್ನೂ ಠಾಣೆಗೆ ಕರೆಯಿಸಿ ರಾಜಿ ಪಂಚಾಯಿತಿ ಮೂಲಕ ಪೊಲೀಸರು ಇವರಿಬ್ಬರ ನಡುವಿನ ಗಲಾಟೆಯನ್ನು ಇತ್ಯರ್ಥಗೊಳಿಸಿದ್ದರು. ಪೊಲೀಸ್ ಠಾಣೆಯಿಂದ ಮನೆಗೆ ವಾಪಾಸು ತೆರಳುತ್ತಿರುವ ಸಂದರ್ಭ ಹರೀಶ್, ಕಂಡ್ಲೂರು ಸೇತುವೆ ಬಳಿ ಆಟೋರಿಕ್ಷಾ ಚಾಲಕನ ಬಳಿ ಆಟೋ ನಿಲ್ಲಿಸಲು ತಿಳಿಸಿದ್ದರು. ಆಟೋ ನಿಲ್ಲಿಸುತ್ತಿದ್ದಂತೆ ಕೆಳಗಿಳಿದ ಹರೀಶ್ ತುಂಬಿ ಹರಿಯುತ್ತಿರುವ ನದಿಗೆ ಏಕಾಏಕಿಯಾಗಿ ಜಿಗಿದಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರೊಂದಿಗೆ ಹರೀಶ್ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೆ ಕಳೆದ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಕಾರ್ಯಾಚರಣೆಗೆ ತೊಡಕಾಗಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.