Home Mangalorean News Kannada News ‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ...

‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ ಬಿಡುಗಡೆ

Spread the love

‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ ಬಿಡುಗಡೆ

ಮಂಗಳೂರು: ‘ಒಂದೆಡೆ’ ಸಂಸ್ಥೆಯ ವತಿಯಿಂದ ಹೊರತರಲಾದ ‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ ಬಿಡುಗಡೆ ಸಮಾರಂಭ ಶುಕ್ರವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

‘ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯ; ಧ್ವನಿ, ಹಕ್ಕುಗಳು ಮತ್ತು ಘನತೆಗಾಗಿ ಹಕ್ಕೊತ್ತಾಯ’ ಕುರಿತಾದ ವರದಿಯ ಪುಸ್ತಕ ಬಿಡುಗಡೆಯನ್ನು ಜಿಲ್ಲಾಧಿಕಾರಿ ಡಾ. ಸೆಸಿಕಾಂತ್ ಸೆಂಥಿಲ್ ನೆರವೇರಿಸಿ ದ.ಕ. ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು, ಅವರಿಗೊಂದು ಘನತೆಯ ಬದುಕನ್ನು ಕಲ್ಪಿಸುವಲ್ಲಿ ಜಿಲ್ಲಾ ಮಟ್ಟದ ನೀತಿಯೊಂದನ್ನು ರೂಪಿಸುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಮಾಜಿಕ ಕಾರ್ಯಕರ್ತೆ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಕೌಟುಂಬಿಕವಾಗಿ ಇಂದಿಗೂ ಸ್ವೀಕರಿಸದಂತಹ ಪರಿಸ್ಥಿತಿ ಇದೆ. ನಮ್ಮ ಮೇಲಿನ ದೌರ್ಜನ್ಯಗಳು ನಿಂತಿಲ್ಲ, ನಮ್ಮ ಮೇಲೆಯೂ ಅತ್ಯಾಚಾರಗಳು ನಡೆಯುತ್ತವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಮ್ಮ ಸಮುದಾಯವನ್ನು ಸಮಾಜ ಘನತೆ, ಗೌರವದಿಂದ ಕಾಣಬೇಕು ಎಂದು ಅಕ್ಕೈ ಪದ್ಮಶಾಲಿ ಮನವಿ ಮಾಡಿಕೊಂಡರು.

ನನ್ನ ಲಿಂಗವನ್ನು ನಾನು ತೀರ್ಮಾನಿಸುವ ಹಕ್ಕನ್ನು ನನಗೆ ಸಂವಿಧಾನ ನೀಡಿದೆ. ಹಾಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಮೇಲೂ ಯಾರಿಗೂ ದೌರ್ಜನ್ಯ ಎಸಗುವ ಅಧಿಕಾರ ಇಲ್ಲ ಎಂದರು. ಲಿಂಗದ ಗುರುತಿಸುವಿಕೆಯ ಮೂಲಕ ನಮ್ಮನ್ನು ಸಮಾಜದಿಂದ ಪ್ರತ್ಯೇಕಿಸುವುದನ್ನು ನಿಲ್ಲಿಸಬೇಕು. ನಮ್ಮನ್ನು ನಾವು ಇರುವಂತೆಯೇ ಸಮಾಜ ಸ್ವೀಕರಿಸಬೇಕೆಂಬುದು ನಮ್ಮ ಕಳಕಳಿಯ ಮನವಿ ಎಂದ ಡಾ.ಅಕ್ಕೈ, ಯಾವುದೇ ಧರ್ಮಗಳು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧವಾಗಿಲ್ಲ. ಬದಲಾಗಿ ಎಲ್ಲಾ ಧರ್ಮಗಳು ಲಿಂಗತ್ವ ಅಲ್ಪಸಂಖ್ಯಾತರಿಗೆ ಘನತೆ, ಗೌರವದ ಬದುಕನ್ನು ಪ್ರತಿಪಾದಿಸುತ್ತವೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಣ, ಉದ್ಯೋಗ, ದತ್ತು ಪಡೆಯುವಿಕೆ ಸೇರಿದಂತೆ ಸಮುದಾಯದ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ನಿಗಾ ವಹಿಸಲು ಲಿಂಗತ್ವ ಅಲ್ಪಸಂಖ್ಯಾತ ಪ್ರತಿನಿಧಿಯನ್ನು ಒಳಗೊಂಡ ಸಮಿತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಚಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಈ ಸಮಿತಿಗಳನ್ನು ರಚಿಸುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಡಾ. ಅಕ್ಕೈ ಪದ್ಮಶಾಲಿ ತಿಳಿಸಿದರು.

ಪರಿವರ್ತನಾ ಟ್ರಸ್ಟ್ನ ಕಾರ್ಯದರ್ಶಿ ಸಂಜನಾ ಮಾತನಾಡಿ, 10 ವರ್ಷಗಳ ಹಿಂದೆ ಮಂಗಳೂರಿಗೆ ಬದುಕನ್ನು ಅರಸಿ ಬಂದಾಗ ಸಮುದಾಯದಿಂದಲೇ ಹಿಂಸೆ ಆಗಿ, ಊಟಕ್ಕೆ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವಾಯ್ಲೆಟ್ ಪಿರೇರಾ ನೇತೃತ್ವದಲ್ಲಿ ಪರಿವರ್ತನಾ ಟ್ರಸ್ಟ್ ನನ್ನಂತೆ ಹಲವು ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಹೊಸ ಬದುಕು ನೀಡಿದೆ. ಹೀಗಿದ್ದರೂ ಕೆಲ ನಕಲಿ ವ್ಯಕ್ತಿಗಳಿಂದಾಗಿ ನಾವು ಪೊಲೀಸ್ ದೌರ್ಜನ್ಯವನ್ನು ಎದುರಿಸುವಂತಾಗಿದೆ. ಜಿಲ್ಲಾಡಳಿತ ನೈಜ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಅವರ ಬದುಕಿಗೆ ಭದ್ರತೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

‘ಒಂದೆಡೆ’ ಕಾರ್ಯಕ್ರಮ ವ್ಯವಸ್ಥಾಪಕಿ ಸನಾಶ್ರೀ ಮಾತನಾಡಿ, ಇಂದು ಬಿಡುಗಡೆಗೊಂಡ ವರದಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್, ಬದಲಾವಣೆ ನಮ್ಮಿಂದಲೇ ಆರಂಭವಾದಾಗ ಸಮಾಜದಲ್ಲಿ ನಾವೆಲ್ಲಾ ಒಂದಾಗಿ ಜೀವಿಸಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ  ವಿದ್ಯಾ ದಿನಕರ್, ಪರಿವರ್ತನಾ ಟ್ರಸ್ಟ್ನ ಶ್ರೀನಿಧಿ ಉಪಸ್ಥಿತರಿದ್ದರು.


Spread the love

Exit mobile version